ಉಜ್ಜಯಿನಿ: ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ಮೊಬೈಲ್ ಸ್ಫೋಟಗೊಂಡು 60 ವರ್ಷದ ರೈತರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತರು ಸುಟ್ಟ ಗಾಯಗಳೊಂದಿಗೆ ತಮ್ಮ ಜಮೀನಿನ ಬಳಿಯ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೊಬೈಲ್ ಸ್ಫೋಟಗೊಂಡಿದ್ದು ಸ್ವಿಚ್ ಬೋರ್ಡ್‌ಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ದಯಾರಾಮ್ ಬರೋದ್ (60) ಎಂದು ಗುರುತಿಸಲಾಗಿದೆ. ಮೃತ ರೈತ ರುನಿಜಾ ರಸ್ತೆಯಲ್ಲಿರುವ ತಮ್ಮ ಜಮೀನಿನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಮೊಬೈಲ್ ಬಳಕೆಯ ವೇಳೆ ಅದು ಸ್ಫೋಟಗೊಂಡಿದೆ. ಕುತ್ತಿಗೆ ಮತ್ತು ಎದೆಯ ಸುತ್ತ ತೀವ್ರ ಸುಟ್ಟ ಗಾಯಗಳಾಗಿವೆ. ಮೃತದೇಹವನ್ನು ವಶಕ್ಕೆ ಪಡೆದಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಣೆಯಲ್ಲಿ ರೈತನ ಮೊಬೈಲ್ ಸಿಡಿದಿದ್ದು ಕಂಡು ಬಂದಿದೆ. ವಿದ್ಯುತ್ ಪ್ಲಗ್ಗಳೂ ಸುಟ್ಟು ಕರಕಲಾಗಿವೆ. ಮೊಬೈಲ್ ಫೋನ್ ಸ್ಫೋಟಗೊಂಡ ನಂತರ ರೈತ ಸುಟ್ಟಗಾಯಗಳಿಗೆ ಒಳಗಾಗಿ ಸಾವನ್ನಪ್ಪಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಸ್ಥಳದಿಂದ ಯಾವುದೇ ಬೇರೆ ಸ್ಫೋಟಕ ವಸ್ತುಗಳು ಅಥವಾ ದಹಿಸುವ ವಸ್ತುಗಳ ಕುರುಹುಗಳು ಪತ್ತೆಯಾಗಿಲ್ಲ.
ಕರೆ ಮಾಡಿದಾಗ ಘಟನೆ ಬೆಳಕಿಗೆ: ರೈತರಿಗೆ ಸಂಬಂಧಿಯೊಬ್ಬರು ಕರೆ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಇಂದೋರ್ ಸಮೀಪದ ಬಿನಾಲ್ಪುರ್ ಗ್ರಾಮದ ದಯಾರಾಮ್ ಅವರ ಸಂಬಂಧಿ ದೀಪಕ್ ಚವ್ಸಾ ಅವರು ಬೆಳಗ್ಗೆ 6.30 ರ ಸುಮಾರಿಗೆ ಕರೆ ಮಾಡಿದ್ದಾರೆ. ಈ ವೇಳೆ ಮೊಬೈಲ್ ರೀಚ್ ಆಗಿಲ್ಲ. "ನೀವು ತಲುಪಲು ಪ್ರಯತ್ನಿಸುತ್ತಿರುವ ಚಂದಾದಾರರು ವ್ಯಾಪ್ತಿಯ ಪ್ರದೇಶದಿಂದ ಹೊರಗಿದ್ದಾರೆ" ಎಂದು ಕೇಳಿಬಂದಿದೆ. ಆಗ ಸಂಬಂಧಿಕರು ರೈತನನ್ನು ಹುಡುಕಿಕೊಂಡು ಬಂದಾಗ ಆತ ಮೃತಪಟ್ಟಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಕರೆ ಬಂದಾಗ ಮೊಬೈಲ್ ಸ್ಫೋಟ: ಕಳೆದ ವರ್ಷ ಕರ್ನಾಟಕದಲ್ಲಿ ಮೊಬೈಲ್ ಸ್ಫೋಟ ಪ್ರಕರಣ ನಡೆದಿತ್ತು. ಪ್ರಯಾಣದ ವೇಳೆ ಮೊಬೈಲ್ ಫೋನ್ ಸ್ಫೋಟಗೊಂಡು ಬೈಕ್ ಸವಾರರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿತ್ತು. ವ್ಯಕ್ತಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಫೋನ್ ಕರೆ ಬಂದಿದೆ. ಈ ವೇಳೆ ಅದನ್ನು ಸ್ವೀಕರಿಸಲು ಜೇಬಿನಿಂದ ಮೊಬೈಲ್ ಹೊರತೆಗೆದಿದ್ದಾರೆ. ಅಷ್ಟರಲ್ಲಿ ಮೊಬೈಲ್ ಸ್ಫೋಟಗೊಂಡಿದೆ. ಅದೃಷ್ಟವಶಾತ್, ಸ್ಫೋಟದ ತೀವ್ರತೆಯು ತುಂಬಾ ಕಡಿಮೆಯಾಗಿದ್ದು, ಗಾಯಗೊಂಡಿದ್ದರು. ಸ್ಫೋಟದ ರಭಸಕ್ಕೆ ಬೈಕ್ ಮೇಲೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದರು. ಇದರಿಂದ ಸವಾರ ಬಸವರಾಜು ತಲೆಗೆ ತೀವ್ರ ಪೆಟ್ಟಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.