ಲಖನೌ(ಉತ್ತರ ಪ್ರದೇಶ): ಚುನಾವಣೆಯಲ್ಲಿ ಸಾಕಷ್ಟು ಹೆಸರು ಕೇಳಿಬರೋದು ರಾಜಕಾರಣಿಗಳದ್ದು. ಆದರೆ, ಆಗಾಗ ಸಿನಿಮಾ ನಟ-ನಟಿಯರ ಹೆಸರೂ ಕೇಳಿಬರುತ್ತದೆ. ಆದರೆ 2019ರ ಲೋಕಸಭಾ ಚುನಾವಣೆಯಿಂದ ಇಲ್ಲಿಯವರೆಗೆ ರಾಜಕಾರಣಿಯಲ್ಲದ, ಸಿನಿಮಾ ಸೆಲೆಬ್ರಿಟಿಯೂ ಅಲ್ಲದ ವ್ಯಕ್ತಿಯೊಬ್ಬರ ಹೆಸರು ಕೇಳಿಬರುತ್ತಿದೆ. ಅವರ ಹೆಸರು ರೀನಾ ದ್ವಿವೇದಿ.
ರೀನಾ ದ್ವಿವೇದಿ, 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾಧಿಕಾರಿ. 2019ರ ಲೋಕಸಭಾ ಚುನಾವಣೆಯಲ್ಲಿ ಮನೆ ಮಾತಾಗಿದ್ದರು. ಚುನಾವಣಾಧಿಕಾರಿಯಾಗಿದ್ದ ಇವರು ಮತಗಟ್ಟೆಗೆ ಬಂದಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
2019ರ ಲೋಕಸಭಾ ಚುನಾವಣೆಯಲ್ಲಿ ಹಳದಿ ಬಣ್ಣದ ಸೀರೆ ಧರಿಸಿ ಬಂದಿದ್ದ ರೀನಾ ಅವರು ಈ ಬಾರಿ ಮೋಹನ್‌ಲಾಲ್‌ಗಂಜ್ ವಿಧಾನಸಭಾ ಕ್ಷೇತ್ರದ ಗೋಸೈಗಂಜ್ ಬೂತ್‌ನಲ್ಲಿ ನಿಯೋಜನೆಗೊಂಡಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ಸ್ಲೀವ್ಲೆಸ್ ಬ್ಲ್ಯಾಕ್ ಟಾಪ್ ಮತ್ತು ಪ್ಯಾಂಟ್ ಧರಿಸಿ ಬಂದಿದ್ದು, ಹೊಸ ಗೆಟಪ್ನಲ್ಲಿ ಬಂದಿದ್ದ ಆಕೆಯನ್ನು ನೋಡಲು ಮತ ಹಾಕುವ ಮತದಾರರು ಮಾತ್ರವಲ್ಲದೇ ಸಾಮಾನ್ಯ ಜನರೂ ಮತಗಟ್ಟೆಯ ಬಳಿ ನೆರೆದಿದ್ದರು.
ಜನರು ಮಾತ್ರವಲ್ಲದೇ, ಪೊಲೀಸರೂ ರೀನಾ ದ್ವಿವೇದಿ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡರು. 2017ರ ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಸರೋಜಿನಿನಗರ ವಿಧಾನಸಭೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆಗಲೂ ಇವರು ಸಾಮಾಜಿಕ ತಾಣಗಳಲ್ಲಿ ಸ್ವಲ್ಪಮಟ್ಟಿಗೆ ಪ್ರಖ್ಯಾತಿ ಪಡೆದುಕೊಂಡಿದ್ದರು.
ಇದನ್ನೂ ಓದಿ: ಎಸ್ಪಿಗೆ ಮತಹಾಕಿದರೆ ಗೂಂಡಾರಾಜ್ ಬೆಂಬಲಿಸಿದಂತೆ : ಮಾಯಾವತಿ ಆರೋಪ
ತಮ್ಮ ಲುಕ್ ಜನಪ್ರಿಯವಾಗುತ್ತಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೀನಾ ದ್ವಿವೇದಿ, ನನಗೆ ಫ್ಯಾಷನ್ ತುಂಬಾ ಇಷ್ಟ ಎಂದಿದ್ದಾರೆ. ಈ ಬಾರಿಯ ಚುನಾವಣೆಯ ಫೋಟೋಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ. ಅವರು ಸದ್ಯಕ್ಕೆ ಉತ್ತರ ಪ್ರದೇಶದ ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ.