ಲಖನೌ (ಉತ್ತರಪ್ರದೇಶ): ಉತ್ತರ ಪ್ರದೇಶ ರಾಜ್ಯಾದ್ಯಂತ ವಿವಿಧ ಧಾರ್ಮಿಕ ಸ್ಥಳಗಳಲ್ಲಿನ 45,773 ಅಕ್ರಮ ಧ್ವನಿವರ್ಧಕಗಳನ್ನು ತೆರವು ಮಾಡಲಾಗಿದೆ. ಇದೇ ವೇಳೆ 58,861 ಧ್ವನಿವರ್ಧಕಗಳ ಶಬ್ಧ ಮಟ್ಟವನ್ನು ಕಡಿಮೆ ಮಾಡಿ, ನಿಯಮಾನುಸಾರಕ್ಕೆ ಒಳಪಡಿಸಲಾಗಿದೆ.
ಉತ್ತರ ಪ್ರದೇಶ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿನ ಅಕ್ರಮ ಧ್ವನಿವರ್ಧಕಗಳನ್ನು ತೆರವುಗೊಳಿಸುವ ಬಗ್ಗೆ ಆದೇಶಿಸಿದ ಕೆಲವೇ ದಿನಗಳಲ್ಲಿ ಈ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇದುವರೆಗೆ ತೆರವು ಧ್ವನಿವರ್ಧಕಗಳ ಅಂಕಿ-ಅಂಶದ ಬಗ್ಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ. ಶನಿವಾರ ಬೆಳಗ್ಗೆಯವರೆಗೆ ಒಟ್ಟಾರೆ 45,773 ಧ್ವನಿವರ್ಧಕಗಳನ್ನು ತೆರವು ಮಾಡಲಾಗಿದೆ ಎಂದಿದ್ದಾರೆ.
ಇತ್ತ, ಧ್ವನಿವರ್ಧಕಗಳ ತೆರವು ವಿಚಾರವಾಗಿ ಜಿಲ್ಲಾಡಳಿತಗಳಿಂದ ಪಾಲನಾ ವರದಿ ಕೇಳಲಾಗಿದೆ. ಧಾರ್ಮಿಕ ನಾಯಕರ ಜೊತೆ ಮಾತುಕತೆ ನಡೆಸಿ ಅವರ ಸಹಕಾರದೊಂದಿಗೆ ಈ ಧ್ವನಿವರ್ಧಕಗಳನ್ನು ತೆರವು ಮಾಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಅವಸ್ಥಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೆಂಪು ಮೆಣಸಿನಕಾಯಿ ಬಗ್ಗೆ ಸಿಎಂ ಮಮತಾಗೆ ಸಲಹೆ ಕೊಟ್ರಾ ಪ್ರಧಾನಿ ಮೋದಿ?