ನವದೆಹಲಿ: ಜಿ20 ಲಾಂಛನದಲ್ಲಿರುವ ಕಮಲವು ಭಾರತದ ಸಾಂಪ್ರದಾಯಿಕ ಗುರುತನ್ನು ಬಹಿರಂಗಪಡಿಸುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಸಮ್ಮುಖದಲ್ಲಿ ಹರಿಯಾಣದ ಜಜ್ಜಾರ್‌ನಲ್ಲಿ ನಡೆದ ಯೋಧ ಪೃಥ್ವಿರಾಜ್ ಚೌಹಾಣ್ ಪ್ರತಿಮೆ ಅನಾವರಣಗೊಳಿಸಿದ ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಿಮಗೆಲ್ಲರಿಗೂ ತಿಳಿದಿರುವಂತೆ ಮುಂದಿನ ವರ್ಷ ಭಾರತವು ಜಿ20 ಶೃಂಗಸಭೆಯನ್ನು ಆಯೋಜಿಸುತ್ತಿದೆ. ಇದಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಕಮಲವನ್ನು ಹೊಂದಿರುವ ಜಿ 20 ಶೃಂಗಸಭೆಗೆ ಸಂಬಂಧಿಸಿದ ಲೋಗೋವನ್ನು ಅನಾವರಣಗೊಳಿಸಿದರು. ಆದ್ರೆ, ವಿರೋಧ ಪಕ್ಷದ ಕೆಲವರು ಲೋಗೋದಲ್ಲಿ ಬಿಜೆಪಿಯ ಚಿಹ್ನೆ ಇದೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಲು ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದ ಬದಲಿಗೆ ದೆಹಲಿಯಲ್ಲಿ ನಡೆಯಲಿದೆ ಜಿ-20 ಸಭೆ
ಆದ್ರೆ, ಕಮಲವನ್ನು 1950 ರಲ್ಲಿ ರಾಷ್ಟ್ರೀಯ ಹೂವು ಎಂದು ಘೋಷಿಸಲಾಗಿದೆ. ಜಿ20 ಲೋಗೋದಲ್ಲಿ ಕಮಲದ ಹೂವನ್ನು ಸೇರಿಸಿರುವುದು ಅದು ನಮ್ಮ ಸಾಂಪ್ರದಾಯದ ಗುರುತು. ಮೋದಿಯವರ ಈ ಕಾರ್ಯ ಪ್ರಶಂಸನೀಯ. ಯಾವುದೇ ಪಕ್ಷಕ್ಕೆ ರಾಜಕೀಯ ಚಿಹ್ನೆಯಾಗಿ ಕೈ ಇದ್ದರೆ ಕೈ ಎಂಬ ಪದ ಬಳಸುವುದಿಲ್ಲವೇ?, ಯಾವುದೇ ಪಕ್ಷಕ್ಕೆ ಸೈಕಲ್ ಇದ್ದರೆ ಸೈಕಲ್ ಬಳಸುವುದಿಲ್ಲವೇ? ಕಮಲ ದೇಶದ ಸಂಪ್ರದಾಯ ಮತ್ತು 'ಹೆಮ್ಮೆ’ ಎಂದರು.
ಇದನ್ನೂ ಓದಿ: ಜಿ-20: ಭಾರತ-ಚೀನಾ ಮಾತುಕತೆ.. ಗಡಿವಿವಾದ ಚರ್ಚೆ
ಇನ್ನು ನ.8 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾರತದ ಜಿ-20 ಅಧ್ಯಕ್ಷತೆಯ ಲಾಂಛನ, ಧ್ಯೇಯ ಮತ್ತು ಅಂತರ್ಜಾಲ ತಾಣವನ್ನು ಅನಾವರಣಗೊಳಿಸಿದ ನರೇಂದ್ರ ಮೋದಿ, 2022ರ ಡಿಸೆಂಬರ್ 1ರಿಂದ ಭಾರತವು ಜಿ -20 ಶೃಂಗಸಭೆಯ ಅಧ್ಯಕ್ಷತೆ ವಹಿಸಲಿದೆ ಎಂದು ಹೇಳಿದರು. ಜೊತೆಗೆ ಆಜಾದಿ ಕಾ ಅಮೃತ ಮಹೋತ್ಸವದ ವರ್ಷದಲ್ಲಿ ಜಿ-20 ಶೃಂಗಸಭೆಯು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯ. ಲಾಂಛನದಲ್ಲಿರುವ ಕಮಲವು ಭಾರತದ ಪ್ರಾಚೀನ ಪರಂಪರೆ, ನಂಬಿಕೆ ಮತ್ತು ಚಿಂತನೆಯನ್ನು ಸಂಕೇತಿಸುತ್ತದೆ. ಈ ಕಠಿಣ ಸಮಯದಲ್ಲಿ ಭರವಸೆಯ ಸಂಕೇತವಾಗಿದೆ. ಅದ್ವೈತ ತತ್ವಜ್ಞಾನವು ಎಲ್ಲಾ ಜೀವಿಗಳ ಏಕತೆಯನ್ನು ಒತ್ತಿಹೇಳುತ್ತದೆ ಮತ್ತು ಈ ತತ್ವಶಾಸ್ತ್ರವು ಇಂದಿನ ಸಂಘರ್ಷಗಳನ್ನು ಪರಿಹರಿಸುವ ಮಾಧ್ಯಮವಾಗಲಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಜಿ-20 ಸಭೆ ನಡೆಸುವ ಭಾರತದ ಪ್ರಸ್ತಾವನೆಗೆ ಚೀನಾ ವಿರೋಧ