ರಾಯಗಢ್ (ಛತ್ತೀಸ್ಗಢ್): ಯಾವುದೇ ವಿವಾದ ಉಂಟಾದರೂ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡುವುದು ಸಾಮಾನ್ಯ. ಆದರೆ, ಛತ್ತೀಸ್ಗಢ್ ರಾಜ್ಯದ ರಾಯಗಢ್ನಲ್ಲಿ ಭೂ ಮತ್ತು ಕಲ್ಯಾಣಿ ಒತ್ತುವರಿ ವಿವಾದಕ್ಕೆ ಸಂಬಂಧಪಟ್ಟ ವಿಚಾರಣೆಗೆ ಶಿವ ದೇವಾಲಯಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ಹೀಗಾಗಿ ಖುದ್ದು 'ಶಿವ'ನೇ ತಹಶೀಲ್ದಾರ್ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾನೆ!.
ಇದು ವಿಚಿತ್ರವಾದರೂ ನಿಜ. ದೇವಾಲಯದ ಹೆಸರಲ್ಲಿ ನೋಟಿಸ್ ಕೊಟ್ಟಿದ್ದರಿಂದ ಶಿವಲಿಂಗವನ್ನೇ ವಿಚಾರಣಾ ಸ್ಥಳಕ್ಕೆ ತರಲಾಗಿದೆ. ಸೈಕಲ್ ರಿಕ್ಷಾದಲ್ಲಿ ಶಿವಲಿಂಗವನ್ನು ಶುಕ್ರವಾರ ಕೂಡಿಸಿಕೊಂಡು ತರಲಾಗಿದೆ. ಆದರೆ, ತಹಶೀಲ್ದಾರ್ ಅವರು ಕಾರ್ಯದೊತ್ತಡದಲ್ಲಿ ಇರುವುದರಿಂದ ಮುಂದಿನ ವಿಚಾರಣೆಯನ್ನು ಏ.13ಕ್ಕೆ ನಿಗದಿ ಮಾಡಲಾಗಿದೆ.
ಏನಿದು ಪ್ರಕರಣ?: ರಾಯಗಢ್ನ 25ನೇ ವಾರ್ಡ್ನಲ್ಲಿ ಸಾರ್ವಜನಿಕ ಶಿವ ದೇವಾಲಯ ಇದೆ. ಇಲ್ಲಿನ ನಿವಾಸಿ ಸುಧಾ ರಾಜ್ವಾಡೇ ಎಂಬುವರು ಸರ್ಕಾರಿ ಜಮೀನನ್ನು ಕಬಳಿಕೆ ಮಾಡಲಾಗಿದೆ ಎಂದು ಆರೋಪಿಸಿ ಶಿವನ ದೇವಾಲಯ ಸೇರಿ 16 ಜನರ ವಿರುದ್ಧ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಪ್ರಕರಣದಲ್ಲಿ ರಾಜ್ಯ ಸರ್ಕಾರ ಮತ್ತು ತಹಶೀಲ್ದಾರ್ ಕಚೇರಿಯಿಂದ ತನಿಖೆ ನಡೆಯಬೇಕೆಂದು ಆದೇಶಿಸಿತ್ತು. ಅಂತೆಯೇ ಮೂರೇ ದಿನದಲ್ಲಿ ತನಿಖಾ ತಂಡವನ್ನು ತಹಶೀಲ್ದಾರ್ ಕಚೇರಿಯಿಂದ ರಚಿಸಲಾಗಿತ್ತು. ಈ ತಂಡವು 10 ಜನ ಆರೋಪಿಗಳೆಂದು ಪರಿಗಣಿಸಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಪ್ರಕರಣದ ವಿಚಾರಣೆಯನ್ನು ಶುಕ್ರವಾರಕ್ಕೆ ನಿಗದಿಪಡಿಸಲಾಗಿತ್ತು. ಇದರಲ್ಲಿ ಅಚ್ಚರಿ ಎಂದರೆ 9 ನೋಟಿಸ್ಗಳನ್ನು ವ್ಯಕ್ತಿಗಳಿಗೆ ನೀಡಿದ್ದರೆ, ಮತ್ತೊಂದು ನೋಟಿಸ್ ದೇವಸ್ಥಾನದ ಟ್ರಸ್ಟಿ, ಮ್ಯಾನೇಜರ್ ಅಥವಾ ಪೂಜಾರಿಗೆ ನೀಡದೆ ನೇರವಾಗಿ ಶಿವನ ಹೆಸರಲ್ಲೇ ಕೊಡಲಾಗಿತ್ತು. ಆದ್ದರಿಂದ ಶುಕ್ರವಾರ ಶಿವಲಿಂಗವನ್ನೇ ತಹಶೀಲ್ದಾರ್ ಕಚೇರಿಗೆ ತರಲಾಗಿದೆ.
ಇದನ್ನೂ ಓದಿ: ಉ.ಪ್ರದೇಶ: ಪ್ರತಿಭಟನೆ ಬಳಿಕ ಹಿಜಾಬ್ ಧರಿಸಿದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ