ನವದೆಹಲಿ:ಸಂಸತ್ತು ಬುಧವಾರ 'ತೆಂಗು ಅಭಿವೃದ್ಧಿ ಮಂಡಳಿ (ತಿದ್ದುಪಡಿ) ಮಸೂದೆ, 2021'ಗೆ ಅನುಮೋದನೆ ನೀಡಿದೆ. ಪ್ರತಿಪಕ್ಷ ಸದಸ್ಯರ ಗದ್ದಲದ ನಡುವೆ ಮಸೂದೆಯನ್ನು ಲೋಕಸಭೆಯಲ್ಲಿ ಧ್ವನಿಮತದಿಂದ ಅಂಗೀಕರಿಸಲಾಯಿತು. ಜುಲೈ 30 ರಂದು ರಾಜ್ಯಸಭೆಯು ಈ ಮಸೂದೆಯನ್ನು ಅಂಗೀಕರಿಸಿತ್ತು
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್, ಕೆಳಮನೆಯಲ್ಲಿ ತೆಂಗು ಅಭಿವೃದ್ಧಿ ಮಂಡಳಿ ದೇಶದ ಒಂದು ದೊಡ್ಡ ಸಂಸ್ಥೆ ಎಂದು ಹೇಳಿದರು. ಇಂದು ತೆಂಗಿನ ಕೃಷಿಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಮತ್ತು ಅದರ ಮಾರುಕಟ್ಟೆ ವ್ಯವಸ್ಥೆಯನ್ನು ಸುಧಾರಿಸುವ ಅವಶ್ಯಕತೆಯಿದೆ ಎಂದ್ರು. ಈ ಮಸೂದೆ ಅಂಗೀಕಾರದ ನಂತರ ತೆಂಗಿನ ಕೃಷಿಯಲ್ಲಿ ಅಮೂಲಾಗ್ರ ಬದಲಾವಣೆಯಾಗಲಿದೆ ಮತ್ತು ತೆಂಗು ಬೆಳೆಯುವ ರೈತರು ದೇಶದ ಅಭಿವೃದ್ಧಿಯಲ್ಲಿ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ತಿದ್ದುಪಡಿ ಕಾಯ್ದೆಯ ಪ್ರಯೋಜನದ ಬಗ್ಗೆ ತಿಳಿಸಿದರು.
ಕಳೆದ ತಿಂಗಳು, ಕೇಂದ್ರ ಸಚಿವ ಸಂಪುಟವು ತೆಂಗು ಅಭಿವೃದ್ಧಿ ಮಂಡಳಿ ಕಾಯ್ದೆ, 1979 ಕ್ಕೆ ತಿದ್ದುಪಡಿಗಳನ್ನು ಅನುಮೋದಿಸಿತು. ಆ ಸಮಯದಲ್ಲಿ ನೀಡಲಾದ ಅಧಿಕೃತ ಬಿಡುಗಡೆಯಲ್ಲಿ, ಈ ತಿದ್ದುಪಡಿಯಲ್ಲಿ, ತೆಂಗು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಕಾರ್ಯನಿರ್ವಾಹಕರಲ್ಲದವರನ್ನಾಗಿ ಮಾಡಲು ಪ್ರಸ್ತಾಪಿಸಲಾಗಿದೆ ಎಂದು ಹೇಳಲಾಗಿದೆ.