ಮುಂಬೈ: ಕೊರೊನಾ ನಿಯಂತ್ರಿಸುವ ಸಲುವಾಗಿ ಮಹಾರಾಷ್ಟ್ರ ಸರ್ಕಾರವು ಲಾಕ್‌ಡೌನ್ ನಿರ್ಬಂಧಗಳನ್ನು ಜೂನ್ 1ರವರೆಗೆ ವಿಸ್ತರಿಸಿದೆ.
ರಾಜ್ಯದ ಮುಖ್ಯ ಕಾರ್ಯದರ್ಶಿ ಸೀತಾರಾಂ ಕುಂಟೆ ಅವರು ಆದೇಶ ಹೊರಡಿಸಿದ್ದು, ಜೂನ್ 1ರ ಬೆಳಗ್ಗೆ 7 ಗಂಟೆಯವರೆಗೆ ನಿರ್ಬಂಧಗಳು ಜಾರಿಯಲ್ಲಿರಲಿವೆ ಎಂದು ಹೇಳಿದ್ದಾರೆ.
ರಾಜ್ಯದೊಳಗೆ ಯಾವುದೇ ವಿಧದ ಸಾರಿಗೆಯ ಮೂಲಕ ಬಂದರೂ ಆರ್‌ಟಿ – ಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದೆ. 48 ಗಂಟೆಗಳ ಒಳಗೆ ಇಂತಹ ವರದಿ ಪಡೆದಿರಬೇಕು. ಸರಕು ಸಾಗಣೆ ವಾಹನಗಳಲ್ಲಿ ಇಬ್ಬರಗಿಂತ ಹೆಚ್ಚು ಮಂದಿ ಪ್ರಯಾಣಿಸುವಂತಿಲ್ಲ. ಈ ವಾಹನಗಳಲ್ಲಿ ಇದ್ದವರೂ ನೆಗೆಟಿವ್ ವರದಿ ಪಡೆದಿರುವುದು ಕಡ್ಡಾಯವಾಗಿದ್ದು, 7 ದಿನ ರಾಜ್ಯದೊಳಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಏಪ್ರಿಲ್ 5ರಂದು ಲಾಕ್‌ಡೌನ್ ನಿರ್ಬಂಧಗಳನ್ನು ಜಾರಿಗೊಳಿಸಲಾಗಿತ್ತು. ಇದೀಗ ಮತ್ತೆ ಕೊರೊನಾ ನಿಯಂತ್ರಿಸುವ ಸಲುವಾಗಿ ಮತ್ತಷ್ಟು ದಿನ ವಿಸ್ತರಿಸಲಾಗಿದೆ.