ನವದೆಹಲಿ : ಲೋಕ್ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ವಿರುದ್ದ ಐವರು ಸಂಸದರು ತಿರುಗಿ ಬಿದ್ದಿದ್ದಾರೆ. ಪಕ್ಷದ ನಾಯಕತ್ವದ ಬದಲಾವಣೆಗಾಗಿ ಪಟ್ಟು ಹಿಡಿದಿರುವ ಸಂಸದರು, ಜೆಡಿಯು ನಾಯಕ ಲಾಲನ್ ಸಿಂಗ್ ಜತೆ ದೆಹಲಿಯಲ್ಲಿ ಸಭೆ ನಡೆಸಿದ್ದಾರೆ. ದೆಹಲಿಯಲ್ಲಿ ಬಂಡಾಯ ಸಂಸದರೊಂದಿಗೆ ಲಾಲನ್ಸಿಂಗ್ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಂಸದರಾದ ಪ್ರಿನ್ಸ್ ರಾಜ್, ಚಂದನ್ ಸಿಂಗ್, ವೀಣಾ ದೇವಿ ಮತ್ತು ಮೆಹಬೂಬ್ ಅಲಿ ಕೈಸರ್ ಹಾಜರಿದ್ದರು.
ಮೂಲಗಳ ಪ್ರಕಾರ, ಸಂಸದರು ಈಗಾಗಲೇ ತಮ್ಮ ನಿರ್ಧಾರವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ತಿಳಿಸಿದ್ದು, ಎಲ್ಜೆಪಿ ತೊರೆದು ಜೆಡಿಯುಗೆ ಸೇರುವ ಸಾಧ್ಯತೆಯಿದೆ. ಚಿರಾಗ್ ಹೊರತುಪಡಿಸಿ ಉಳಿದ ಐವರು ಸಂಸದರು ಚಿರಾಗ್ ಚಿಕ್ಕಪ್ಪ ಪಶುಪತಿ ಪರಾಸ್ ಪಕ್ಷದ ನೇತೃತ್ವವನ್ನು ವಹಿಸಬೇಕೆಂದು ಬಯಸಿದ್ದಾರೆ. ಚಿರಾಗ್ ಪಕ್ಷದಲ್ಲಿರುವ ಬಗ್ಗೆ ಯಾವುದೇ ತೊಂದರೆಯಿಲ್ಲ. ಆದರೆ, ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ಪಶುಪತಿ ನೇಮಕವಾಗಬೇಕು ಎಂದು ಸಂಸದರು ಬಿಗಿಪಟ್ಟು ಹಿಡಿದಿದ್ದಾರೆ.
ತಂದೆ ರಾಮ್ ವಿಲಾಸ್ ಪಾಸ್ವಾನ್ ನಿಧನದ ನಂತರ ಎಲ್ಜೆಪಿಯನ್ನು ನಿಭಾಯಿಸುವಲ್ಲಿ ಚಿರಾಗ್ ಪಾಸ್ವಾನ್ ಹೆಣಗಾಡುತ್ತಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಸ್ಪರ್ಧಿಸಿದ್ದ ಎಲ್ಲಾ ಕ್ಷೇತ್ರಗಳಲ್ಲಿಯೂ ಎಲ್ಜೆಪಿ ಸ್ಪರ್ಧಿಸಿತ್ತು. ಆದರೆ, 25 ಸ್ಥಾನಗಳಲ್ಲಿ ಸೋತು ತೀವ್ರ ಮುಖಭಂಗ ಅನುಭವಿಸಿತು.
ಚಿರಾಗ್ ಪಾಸ್ವಾನ್ರನ್ನು ಕೆಳಮನೆ ಸಂಸದೀಯ ಪಕ್ಷದ ನಾಯಕ ಸ್ಥಾನದಿಂದ ಉಚ್ಛಾಟಿಸುವಲ್ಲಿ ಜೆಡಿಯುನ ಲಾಲನ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ವದಂತಿಗಳ ಮಧ್ಯೆಯೇ ಈ ಸಭೆ ನಡೆದಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.