ನವದೆಹಲಿ : ದಕ್ಷಿಣ ಭಾರತದಲ್ಲಿ ಈ ವರ್ಷ ಮಳೆಯ ಆರ್ಭಟ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕದಲ್ಲಿ ವರುಣಾಘಾತದ ಬೆನ್ನಲ್ಲೇ ಈಗ ಮತ್ತೆ ಪೂರ್ವ ಕರಾವಳಿಯಲ್ಲಿ ಚಂಡಮಾರುತದ ಸದ್ದು ಕೇಳತೊಡಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಸೈಕ್ಲೋನ್ ಸೃಷ್ಟಿಯಾಗಿದೆ.
cyclone Jawad alert: ವಾಯುಭಾರ ಕುಸಿತದಿಂದಾಗಿ ಉಂಟಾಗಿರುವ ಜವಾದ್ ಚಂಡಮಾರುತದ ಪರಿಣಾಮ ಆಂಧ್ರಪ್ರದೇಶದ ಉತ್ತರ ಕರಾವಳಿ ಮತ್ತು ಒಡಿಶಾದ ದಕ್ಷಿಣ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಶುಕ್ರವಾರ ಸಂಜೆಯಿಂದ ಚಂಡಮಾರುತದ ರಚನೆಯ ಸಾಧ್ಯತೆಯಿದೆ ಎಂದಿದೆ. ಮಂಗಳವಾರ ಬೆಳಗ್ಗೆ ದಕ್ಷಿಣ ಥೈಲ್ಯಾಂಡ್ ಮತ್ತು ಸುತ್ತಲಿನ ಪ್ರದೇಶದಲ್ಲಿ ಕಡಿಮೆ ಒತ್ತಡವು ಸಂಜೆಯ ವೇಳೆಗೆ ಮಧ್ಯ ಅಂಡಮಾನ್ ಸಮುದ್ರದತ್ತ ದೂಡಲ್ಪಟ್ಟಿದೆ. ಇದು ಬುಧವಾರ ಬೆಳಗ್ಗೆ 8.30ರವರೆಗೆ ಅದೇ ಪ್ರದೇಶದಲ್ಲಿ ಮುಂದುವರೆದಿತ್ತು.
Jawad to hit Andhra Pradesh and Odisha : ಗುರುವಾರದ ವೇಳೆಗೆ ಚಂಡಮಾರುತವು ಪಶ್ಚಿಮ-ವಾಯವ್ಯದ ಕಡೆ ಪ್ರಯಾಣಿಸುವ ಸಾಧ್ಯತೆ ಇದೆ ಮತ್ತು ಆಗ್ನೇಯ ಮತ್ತು ಪಕ್ಕದ ಪೂರ್ವ-ಮಧ್ಯ ಬಂಗಾಳ ಕೊಲ್ಲಿ ಮೇಲೆ ವಾಯುಭಾರ ಕುಸಿತ ಪರಿಣಾಮ ಬೀರಲಿದೆ. 24 ಗಂಟೆಗಳಲ್ಲಿ ಬಂಗಾಳಕೊಲ್ಲಿಯ ಮಧ್ಯಭಾಗದಲ್ಲಿ ಚಂಡಮಾರುತದ ತೀವ್ರತೆ ಹೆಚ್ಚಾಗಲಿದೆ. ಇದು ಡಿಸೆಂಬರ್ 3 ಅಥವಾ 4ರಂದು ಆಂಧ್ರ, ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ ಎಂದು ಇಲಾಖೆ ತಿಳಿಸಿದೆ.
ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವುದರೊಂದಿಗೆ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗುತ್ತದೆ. ಆಂಧ್ರಪ್ರದೇಶದ ಉತ್ತರ ಕರಾವಳಿ ಮತ್ತು ಒಡಿಶಾದ ದಕ್ಷಿಣ ಕರಾವಳಿಯಲ್ಲಿ ಭಾರೀ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇದರ ಜೊತೆ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಅಸ್ಸೋಂ, ಮೇಘಾಲಯ ಮತ್ತು ತ್ರಿಪುರದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ವಾಯುಭಾರ ಕುಸಿತವು ಸೈಕ್ಲೋನಿಕ್ ಚಂಡಮಾರುತವಾಗಿ ಪರಿವರ್ತನೆಗೊಂಡಾಗ ಅದನ್ನು 'ಜವಾದ್ ಸೈಕ್ಲೋನ್ ' ಎಂದು ಹೆಸರಿಸಲಾಗುವುದು.
ಇದನ್ನೂ ಓದಿ: ಬಿಎಸ್‌ಎಫ್ 57ನೇ ರೈಸಿಂಗ್ ಡೇ: ಮಾತೃಭೂಮಿಯ ಸೇವೆಯಲ್ಲಿ ನಮ್ಮ ಪ್ರಯಾಣ ಶಾಶ್ವತ ಎಂದು ಟ್ವೀಟ್