ಪಾಟ್ನಾ(ಬಿಹಾರ): ಮುಂಗಾರು ಅಬ್ಬರ ಶುರುವಾಗಿದ್ದು, ಬಿಹಾರದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸಿಡಿಲು ಬಡಿದು ಕನಿಷ್ಠ 23 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಭಾರೀ ಮಳೆ, ಗುಡುಗು, ಮಿಂಚು ಪ್ರವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೋಹ್ತಾಸ್ ಜಿಲ್ಲೆಯಲ್ಲಿ 6 ಮಂದಿ ಸಾವನ್ನಪ್ಪಿರುವುದು ಅತ್ಯಧಿಕವಾಗಿದೆ. ಇದಲ್ಲದೇ, ಜಹಾನಾಬಾದ್, ಬಕ್ಸಾರ್ ಮತ್ತು ಜಮುಯಿಯಲ್ಲಿ ತಲಾ ಮೂರು, ಗಯಾ, ಬಂಕಾ ಮತ್ತು ಭಾಗಲ್ಪುರದಲ್ಲಿ ತಲಾ ಎರಡು, ಔರಂಗಾಬಾದ್ ಮತ್ತು ಕತಿಹಾರ್‌ನಲ್ಲಿ ತಲಾ ಒಂದು ಸಾವು ಆಗಿದೆ.
ಘಟನೆಗೆ ಸಂಬಂಧಿಸಿದಂತೆ ತೀವ್ರ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಪ್ರತಿ ಮೃತರ ಕುಟುಂಬ ಸದಸ್ಯರಿಗೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಸಿಡಿಲಿನಿಂದ ಆಗುತ್ತಿರುವ ಅನಾಹುತದಿಂದ ತಪ್ಪಿಸಿಕೊಳ್ಳಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಹವಾಮಾನ ಇಲಾಖೆ ನೀಡಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ ಎಂದು ಅವರು ಜನರಲ್ಲಿ ಮನವಿ ಮಾಡಿದ್ದಾರೆ.
ಮಾರ್ಗಸೂಚಿಗಳೇನು?: ಭಾರೀ ಮಳೆಯ ಸಮಯದಲ್ಲಿ ಜನರು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವವರು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು, ಮರಗಳು, ವಿದ್ಯುತ್ ಕಂಬಗಳು ಅಥವಾ ಮಣ್ಣಿನಿಂದ ಮಾಡಿದ ಮನೆಗಳ ಕೆಳಗೆ ನಿಲ್ಲುವುದನ್ನು ತಪ್ಪಿಸಬೇಕೆಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮನವಿ ಮಾಡಿದೆ.
ನಗರ ಪ್ರದೇಶಗಳಲ್ಲಿ ವಾಸಿಸುವ ಜನರು ಕಿಟಕಿಗಳಿಂದ ದೂರವಿರಿ, ಮಳೆಯ ಸಮಯದಲ್ಲಿ ರೆಫ್ರಿಜರೇಟರ್, ಎಸಿಗಳಂತಹ ವಿದ್ಯುತ್ ಉಪಕರಣಗಳನ್ನು ಮುಟ್ಟಬೇಡಿ. ಕಟ್ಟಡಗಳ ಮೇಲ್ಛಾವಣಿಗೆ ಹೋಗುವುದನ್ನು ತಪ್ಪಿಸುವಂತೆ ಜನರಿಗೆ ಎಚ್ಚರಿಕೆ ನೀಡಿದೆ.
ಪಶ್ಚಿಮಬಂಗಾಳದಲ್ಲಿ 7 ಮಂದಿ ಸಾವು: ಕೆಲ ದಿನಗಳ ಹಿಂದೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಸಿಡಿಲು ಬಡಿದು ಮೂವರು ಮಕ್ಕಳು ಸೇರಿದಂತೆ 7 ಜನರು ಸಾವನ್ನಪ್ಪಿದ್ದರು. ಹಳೆ ಮಾಲ್ಡಾದಲ್ಲಿ ಒಬ್ಬರು ಸಾವನ್ನಪ್ಪಿದ್ದರೆ, ಉಳಿದ 6 ಜನರು ಕಾಲಿಯಾಚಕ್ ಪ್ರದೇಶದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ನಿತಿನ್ ಸಿಂಘಾನಿಯಾ ಘಟನೆ ಬಗ್ಗೆ ಮಾಹಿತಿ ನೀಡಿದ್ದರು. ಅಲ್ಲದೇ, ಒಟ್ಟು ಒಂಬತ್ತು ಜಾನುವಾರುಗಳು ಸಹ ಜೀವ ಬಿಟ್ಟಿದ್ದವು.
ಇತ್ತ ಕರ್ನಾಟಕದ ದಾವಣಗೆರೆಯಲ್ಲೂ ಸಿಡಿಲಿಗೆ ಇಬ್ಬರ ಪ್ರಾಣ ಹಾರಿಹೋಗಿದೆ. ಜಿಲ್ಲೆಯ ಜಗಳೂರು ತಾಲೂಕಿನ ಅಣಬೂರು ಗ್ರಾಮದಲ್ಲಿ ಈಚೆಗೆ ಮಳೆ ಸುರಿದಿದ್ದು, ಮಿಂಚು ಬಡಿದು ಇಬ್ಬರು ಅಸುನೀಗಿರುವ ಘಟನೆ ನಡೆದಿದೆ. ಗೊಲ್ಲರಹಟ್ಟಿ ಗ್ರಾಮದ ಕಾಟಲಿಂಗಪ್ಪ (42) ಹಾಗೂ ರಾಜು (32) ಮೃತರು.
ಕಾಟಲಿಂಗಪ್ಪ ಹಾಗು ರಾಜು ಸೇರಿ ಐವರು ಕೃಷಿ ಚಟುವಟಿಕೆಗಾಗಿ ಜಮೀನಿಗೆ ತೆರಳಿದ್ದರು. ಹತ್ತಿ ಬಿತ್ತುವ ಕಾರ್ಯ ಮುಗಿಸಿಕೊಂಡು ಸಂಜೆ ಮನೆಗೆ ಹಿಂದಿರುಗುವಾಗ ಮಳೆ ಬರುತ್ತಿತ್ತು. ಮಳೆಯಿಂದ ಆಶ್ರಯ ಪಡೆಯಲು ಐವರ ಪೈಕಿ ಕಾಟಲಿಂಗಪ್ಪ ಹಾಗು ರಾಜು ಇಬ್ಬರು ಮರದಡಿ ನಿಂತಿದ್ದಾಗ ಸಿಡಿಲು ಬಡಿದಿತ್ತು. ಸಿಡಿಲೇಟಿಗೆ ಇಬ್ಬರೂ ಸ್ಥಳದಲ್ಲೇ ಜೀವ ಬಿಟ್ಟಿದ್ದರು.
ಇದನ್ನೂ ಓದಿ: Dakshina Kannada Rain: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗೆ ಓರ್ವ ಬಲಿ: ರೆಡ್ ಅಲರ್ಟ್, ಶಾಲೆಗಳಿಗೆ ರಜೆ ಘೋಷಣೆ