ಬದೌನ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಬದೌನ್‌ನಲ್ಲಿ ಇಬ್ಬರು ಮಹಿಳೆಯರು ವಿವಾಹವಾಗಿದ್ದಾರೆ. ಯುವತಿಯೊಬ್ಬಳು ತನ್ನ ಗರ್ಭಿಣಿ ಸ್ನೇಹಿತೆಯನ್ನೇ ದೇವಸ್ಥಾನದಲ್ಲಿ ಮದುವೆಯಾಗಿದ್ದಾಳೆ. ಇಬ್ಬರೂ ಪರಸ್ಪರ ಹೂವಿನ ಮಾಲೆ ಹಾಕಿಕೊಂಡಿರುವ ಹಾಗೂ ಹಣೆಗೆ ಸಿಂಧೂರ ಹಚ್ಚುತ್ತಿರುವ ವಿವಾಹದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ. ಸದ್ಯ ಮನೆಗೆ ಮರಳಿದ ಇಬ್ಬರು ಒಟ್ಟಿಗೆ ವಾಸ ಮಾಡುತ್ತಿದ್ದಾರೆ.
ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರೀತಿಯಲ್ಲಿ ಬಿದ್ದೆ: ದತಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಬೇರೆ ಬೇರೆ ಗ್ರಾಮಗಳಲ್ಲಿ ವಾಸಿಸುತ್ತಿದ್ದ ಇಬ್ಬರೂ ದತಗಂಜ್‌ನ ಬಟ್ಟೆ ಅಂಗಡಿಯಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುವಾಗ ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ಇದಾದ ನಂತರ ಇಬ್ಬರೂ ಪರಸ್ಪರ ಬದುಕುವ ಕನಸುಗಳನ್ನು ಕಟ್ಟಿಕೊಂಡರು. ಪತಿ ಕಿರುಕುಳ ನೀಡುತ್ತಿರುವುದಾಗಿ ಕೆಲ ದಿನಗಳ ಹಿಂದೆ ಓರ್ವ ಮಹಿಳೆ ಮತ್ತೋರ್ವ ಯುವತಿಗೆ ಹೇಳಿದ್ದಳು. ಇದನ್ನು ಕೇಳಿದ ತಕ್ಷಣ ಆಕೆಯ ಸ್ನೇಹಿತೆ ಅವಳ ಮನೆ ತಲುಪಿದಳು. ಬಳಿಕ ಸೆ.26ರಂದು ಇಬ್ಬರೂ ವಾಕಿಂಗ್ ಹೋಗುವ ನೆಪದಲ್ಲಿ ಮನೆಯಿಂದ ಹೊರಟು ಬರೇಲಿ ತಲುಪಿದ್ದರು.
ಇಲ್ಲಿ ಇಬ್ಬರೂ ದೇವಸ್ಥಾನಕ್ಕೆ ತೆರಳಿ ಪರಸ್ಪರ ಹಾರ ಬದಲಾಯಿಸಿಕೊಂಡು ವಿವಾಹವಾಗಿದ್ದಾರೆ. ಮದುವೆಯ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಇದಾದ ನಂತರ ಈ ವಿಷಯ ಆ ಪ್ರದೇಶದಲ್ಲಿ ಚರ್ಚೆಗೆ ಗ್ರಾಸವಾಯಿತು. ಈ ಜೋಡಿ ಮನೆಯಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದಾರೆ.
ಮಗು ದತ್ತು ತೆಗೆದುಕೊಳ್ಳಲು ನಿರ್ಧಾರ: ತನ್ನ ಗರ್ಭಿಣಿ ಸ್ನೇಹಿತೆಗೆ ಸಿಂಧೂರ ಹಚ್ಚಿದ ಯುವತಿಯು, ಗಂಡ ನೋಡಿಕೊಳ್ಳುವ ರೀತಿಯಲ್ಲೇ ಯಾವಾಗಲೂ ಸಂತೋಷವಾಗಿರಿಸಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ. ಆಕೆಯ ಮಗುವನ್ನು ದತ್ತು ತೆಗೆದುಕೊಳ್ಳುತ್ತೇನೆ. ಒಬ್ಬ ಹುಡುಗ ತನ್ನ ಹೆಂಡತಿಯನ್ನು ಹೇಗೆ ನಡೆಸಿಕೊಳ್ಳುತ್ತಾನೋ, ಅವಳನ್ನು ಕೂಡ ಅದೇ ರೀತಿ ಕಾಳಜಿಯಿಂದ ನೋಡಿಕೊಳ್ಳುತ್ತೇನೆ. ನಾವಿಬ್ಬರೂ ಒಂದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದೆವು. ಅದೇ ಸಮಯದಲ್ಲಿ ಅವಳು ನನ್ನನ್ನು ಪ್ರೀತಿಸುತ್ತಿದ್ದಳು. ಅವಳು ತನ್ನ ಗಂಡನಿಂದ ತುಂಬಾ ತೊಂದರೆಗಳನ್ನು ಎದುರಿಸುತ್ತಿದ್ದಳು. ಅವಳು ನನ್ನೊಂದಿಗೆ ಇರಲು ಕೇಳುತ್ತಿದ್ದಳು. ಅದಕ್ಕಾಗಿಯೇ ನಾವು ಈ ಹೆಜ್ಜೆ ಇಟ್ಟಿದ್ದೇವೆ ಎಂದು ಯುವತಿ ತಿಳಿಸಿದರು.
ಅಕ್ರಮ ಸಂಬಂಧವಿದೆ ಎಂದು ನನ್ನ ಮೇಲೆ ಆರೋಪಿಸುತ್ತಿದ್ದರು. ಅದಕ್ಕೇ ನಾನು ಯುವತಿ ಜೊತೆ ಇದ್ದೇನೆ ಎಂದು ತೋರಿಸಲು ಮದುವೆಯಾದೆ. ನಾನು ಯಾವ ಹುಡುಗನೊಂದಿಗೂ ಸಂಬಂಧ ಹೊಂದಿಲ್ಲ. ನನಗೆ ಹುಟ್ಟಲಿರುವ ಮಗುವಿಗೆ ನಾನೇ ಹೆಸರು ಇಡಲು ಬಯಸುತ್ತೇನೆ. ತನ್ನ ಉಳಿದ ಜೀವನವನ್ನು ತನ್ನ ಸ್ನೇಹಿತೆ ಮತ್ತು ಮಗುವಿನೊಂದಿಗೆ ಬದುಕುತ್ತೇನೆ ಎಂದು ಎರಡನೇ ಮದುವೆಯಾದ ಮಹಿಳೆ ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ಗೆ ಮತ್ತೊಂದು ಸಂಕಷ್ಟ: ನಿವಾಸ ಅಕ್ರಮ ನವೀಕರಣ ತನಿಖೆ ಆರಂಭಿಸಿದ ಸಿಬಿಐ