ಲಖನೌ: ಕಾಡು ನಾಶ, ಆಹಾರ ಕೊರತೆಯಿಂದಾಗಿ ಪ್ರಾಣಿಗಳು ನಾಡಿಗೆ ಬಂದು ದಾಳಿ ಮಾಡುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಉತ್ತರಪ್ರದೇಶದಲ್ಲಿ 75 ವರ್ಷದ ವೃದ್ಧೆಯ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ. ಜನರು ಎಚ್ಚರದಿಂದಿರಲು ಅಲ್ಲಿನ ಅಧಿಕಾರಿಗಳು ಸೂಚಿಸಿದ್ದಾರೆ.
ದುಧ್ವಾ ಬಫರ್ ವಲಯದ ಧೌರಾಹ್ರಾ ಅರಣ್ಯ ಪ್ರದೇಶದಲ್ಲಿ ಚಿರತೆ ದಾಳಿ ನಡೆದಿದೆ. ರಾಮನಗರ ಬಾಘಾ ಗ್ರಾಮದ ನಿವಾಸಿ ರಾಮಕಾಲಿ ಮೃತ ಮಹಿಳೆಯಾಗಿದ್ದಾರೆ. ಧೌರಾಹ್ರಾ ಅರಣ್ಯ ಪ್ರದೇಶದಲ್ಲಿ ಈ ಮಧ್ಯೆ ಚಿರತೆಗಳ ಓಡಾಟ ಹೆಚ್ಚಾಗಿದೆ. ಮಂಗಳವಾರ ಮಹಿಳೆ ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಅಲ್ಲಿಯೇ ಇದ್ದ ಗುಡಿಸಲಿನಲ್ಲಿ ಮಲಗಿದ್ದಾಗ ಚಿರತೆ ದಾಳಿ ಮಾಡಿದೆ.
ಕುತ್ತಿಗೆಯನ್ನು ಬಾಯಿಯಿಂದ ಹಿಡಿದುಕೊಂಡಿದೆ. ಇದರಿಂದ ಮಹಿಳೆ ಒದ್ದಾಡಿದ್ದಾರೆ. ಪಕ್ಕದಲ್ಲಿದ್ದ ಪುತ್ರ ಇದನ್ನು ಕಂಡು ಸಹಾಯಕ್ಕಾಗಿ ಕೂಗಿದ್ದಾನೆ. ನೆರೆಹೊರೆಯವರ ಸಹಾಯದಿಂದ ಚಿರತೆಯನ್ನು ಕಾಡಿಗೆ ಓಡಿಸಿದ್ದಾರೆ. ಆದರೆ, ಅಷ್ಟರಲ್ಲಿ ವೃದ್ಧೆ ಉಸಿರುಗಟ್ಟಿ ಸಾವನ್ನಪ್ಪಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯ ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಪ್ರದೇಶದಲ್ಲಿ ಕಾಡುಪ್ರಾಣಿಗಳ ಓಡಾಟ ಹೆಚ್ಚಿದೆ. ನಿನ್ನೆ ರಾತ್ರಿ ಚಿರತೆ ಮಹಿಳೆಯನ್ನು ಕೊಂದು ಹಾಕಿದೆ. ಮೇಲ್ವಿಚಾರಣೆ ಮಾಡಲು ಮತ್ತು ಚಿರತೆಗಳ ಚಲನವಲನಗಳ ಮೇಲೆ ನಿಗಾ ಇಡಲು ಅರಣ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಅಲ್ಲದೇ, ಅರಣ್ಯ ಸುತ್ತಮುತ್ತಲಿನ ಪ್ರದೇಶಗಳ ಜನರು ಕಾಡು ಪ್ರಾಣಿಗಳ ಚಲನವಲನಗಳ ಬಗ್ಗೆ ನಿಗಾ ವಹಿಸಿ, ಜಾಗೃತರಾಗಿರಲು ತಿಳಿಸಿದರು.
ಮಹಿಳೆ ಕೊಂದ ಒಂಟೆ: ಇನ್ನೊಂದೆಡೆ, ಹತ್ರಾಸ್ ಜಿಲ್ಲೆಯ ಬಸ್ಗೋಯ್ ಗ್ರಾಮದಲ್ಲಿ ಒಂಟೆಯೊಂದು ತನ್ನ ಮಹಿಳೆಯನ್ನು ಕೊಂದಿರುವ ಘಟನೆ ಇತ್ತೀಚೆಗೆ ವರದಿಯಾಗಿದೆ. ನೀರುಣಿಸಲು ಬಂದ ಮಹಿಳೆಯ ಮೇಲೆ ದಾಳಿ ಮಾಡಿರುವ ಒಂಟೆ ಆಕೆಯ ಕೈಯನ್ನು ಕಚ್ಚಿ, ತಲೆಯನ್ನು ಕಡಿದಿದೆ. ತೀವ್ರ ಗಾಯಗೊಂಡ ಮಹಿಳೆ ಮೃತಪಟ್ಟಿದ್ದಾಳೆ.
ಒಂಟೆ ಗಾಡಿ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬ ಇದಾಗಿದ್ದು, ಸಂಜೆ ಕೆಲಸ ಮುಗಿಸಿಕೊಂಡು ಮಾಲೀಕ ಮನೆಗೆ ಬಂದಿದ್ದಾನೆ. ಈ ವೇಳೆ ಮಹಿಳೆ ಒಂಟೆಗೆ ನೀರುವ ಕುಡಿಸಲು ಹೋದಾಗ ಅದು ದಾಳಿ ಮಾಡಿದೆ. ಕಿರುಚಾಟ ಕೇಳಿ ಅಲ್ಲಿಗೆ ಜನರು ಬಂದರೂ ಮಹಿಳೆಯನ್ನು ರಕ್ಷಣೆ ಮಾಡಲಾಗಿಲ್ಲ.
ಇದರಿಂದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಒಂಟೆ ಸಮಾಧಾನಗೊಂಡ ಬಳಿಕ ಅದನ್ನು ಕಟ್ಟಿಹಾಕಲಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ಕುಟುಂಬಸ್ಥರು ಅನುಮತಿ ನಿರಾಕರಿಸಿದ್ದಾರೆ.
ಇದನ್ನೂ ಓದಿ: ಜೋಯಿಡಾ ಕುಗ್ರಾಮದಲ್ಲಿ ವೃದ್ಧೆ ಅಸ್ವಸ್ಥ: 2.5 ಕಿಮೀ ಜೋಳಿಗೆಯಲ್ಲೇ ಹೊತ್ತೊಯ್ದು ಚಿಕಿತ್ಸೆ ಕೊಡಿಸಿದ ಗ್ರಾಮಸ್ಥರು