ಕಣ್ಣೂರು (ಕೇರಳ) : ಬಕಳಂ ಮೂಲದ ಶೋಭನಾ ಅವರಿಗೆ ಹಾಸಿಗೆ ಹಿಡಿದ ರೋಗಿಗಳನ್ನು ಆರೈಕೆ ಮಾಡುವುದರತ್ತ ಹೆಚ್ಚು ಒಲವು. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಶೋಭನಾ ಅವರು ಭಾರತೀಯ ವಿದ್ಯಾಭವನ ಮತ್ತು ಶ್ರೀ ನಾರಾಯಣ ವಿದ್ಯಾಲಯದಲ್ಲಿ 10 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ನಂತರ ಉದಾತ್ತ ಉದ್ದೇಶಕ್ಕಾಗಿ ಶಿಕ್ಷಕಿ ವೃತ್ತಿಯನ್ನೇ ತ್ಯಜಿಸಿರುವ ಅವರು, ರೋಗಗಳಿಂದ ನೊಂದಿರುವ ಜನಗಳ ಸೇವೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ.
2006 ರಿಂದ ಇಲ್ಲಿಯವರೆಗೆ ಶೋಭನಾ ಅವರ ಜೀವನವು ಹಾಸಿಗೆ ಹಿಡಿದ ರೋಗಿಗಳಿಗೆ ಮುಡಿಪಾಗಿದೆ. ಅವರು ಮನೆಯಿಂದ ಮನೆಗೆ ಹೋಗಿ ಹಾಸಿಗೆ ಹಿಡಿದ ರೋಗಿಗಳಿಗೆ ಅಗತ್ಯ ಇರುವ ಆರೈಕೆ ಮತ್ತು ಸಹಾಯ ನೀಡುತ್ತಿದ್ದಾರೆ. ಈ ಮಾನವೀಯ ಸೇವೆ ಅವರನ್ನು ಅನನ್ಯಗೊಳಿಸಿದೆ. ಶೋಭನಾ ಈ ಉತ್ತಮ ಕಾರ್ಯ ಆರಂಭಿಸಿ 17 ವರ್ಷಗಳಾಗಿವೆ. ಯಾರಿಂದಲೂ ಒಂದು ರೂಪಾಯಿ ಪಡೆಯದೇ ಹಾಸಿಗೆ ಹಿಡಿದ ರೋಗಿಗಳನ್ನು ಅವರು ಆರೈಕೆ ಮಾಡುತ್ತಿದ್ದಾರೆ.
ತಳಿ ಪರಂಬ 7ನೇ ಮೈಲಿನಲ್ಲಿರುವ ಸಂಜೀವಿನಿ ಸಾಂತ್ವನ ಮನೆಯಿಂದ ಶೋಭನಾ ಅವರ ಆರೈಕೆಯ ಕಾರ್ಯ, ನಿತ್ಯ ಬೆಳಗ್ಗೆ 8.30ಕ್ಕೆ ಆರಂಭವಾಗುತ್ತದೆ. ಅವರು ಆಂಬ್ಯುಲೆನ್ಸ್‌ನಲ್ಲಿ ನರ್ಸ್ ಮತ್ತು ಡ್ರೈವರ್‌ನೊಂದಿಗೆ ತಮ್ಮ ದಿನಚರಿ ಪ್ರಾರಂಭಿಸುತ್ತಾರೆ. ಕೆಲವೊಮ್ಮೆ ಶೋಭನಾ ಜೊತೆ ಮೆಡಿಕಲ್ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳೂ ಸೇರಿಕೊಳ್ಳುತ್ತಾರೆ. ಅವರು ಶೋಭನಾ ಅವರನ್ನ ತಮ್ಮ ಗುರು ಎಂದೇ ಪರಿಗಣಿಸಿದ್ದಾರೆ. ಕಾಯಿಲೆಯವರ ಆರೈಕೆಯಲ್ಲಿ ಶೋಭನಾ ಅವರಿಂದ ಕಲಿಯುವುದು ಬಹಳಷ್ಟಿದೆ. ಒಮ್ಮೆ ತಮ್ಮ ಸೇವೆಯನ್ನು ಆರಂಭಿಸಿದ ಶೋಭನಾ ಅವರು ದೂರ, ಗಡಿ, ಅವಧಿ ಮರೆತು ಕಲ್ಯಾಸೇರಿ, ಪಟ್ಟುವಂ, ಪರಿಯಾರಂ, ಕುರುಮತ್ತೂರು, ಚೆನಗಲಾಯಿ ಮುಂತಾದ ಪಂಚಾಯಿತಿಗಳಿಗೆ ಹಾಗೂ ಅಂಥೂರು, ತಳಿಪರಂಬ ಪುರಸಭೆಗಳಿಗೆ ತೆರಳಿ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಶೋಭನಾ ಆರೈಕೆಯಲ್ಲಿ ನಳನಳಿಸಿದ ಸಂತಸ : ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಿಂದ ಹಾಸಿಗೆ ಹಿಡಿದವರು ಸೇರಿದಂತೆ ಪಾರ್ಶ್ವವಾಯು, ಮಧುಮೇಹದಂತಹ ಕಾಯಿಲೆಗಳಿಂದ ಅಸಹಾಯಕರಾದ ಜನಗಳ ಬಳಿಗೆ ಶೋಭನಾ ಅವರ ಪಯಣ ಸಾಗುತ್ತದೆ. ಅವರ ಕಾಳಜಿ ಮತ್ತು ಸಾಂತ್ವನವು ಅವರ ರೋಗಿಗಳನ್ನು ತೀವ್ರ ನೋವಿನಲ್ಲೂ ನಗುವಂತೆ ಪ್ರೇರೇಪಿಸುತ್ತದೆ. ನಿತ್ಯವೂ ಶೋಭನಾ ಅವರ ಪ್ರಯಾಣ ಚೆನ್ನಾಗಿ ಯೋಜಿಸಲಾಗುತ್ತದೆ. ಅವರು ನಿತ್ಯ ರೋಗಿಗಳನ್ನು ತಲುಪಲು ರೂಟ್ ಮ್ಯಾಪ್ ಸಿದ್ಧಪಡಿಸುತ್ತಾರೆ. ತಂಡವು ಸುಮಾರು 150 ಕಿ ಮೀ ಪ್ರಯಾಣಿಸುತ್ತದೆ. ಅಲ್ಲದೇ ನಿತ್ಯ 25 ರಿಂದ 30 ಹಾಸಿಗೆ ಹಿಡಿದ ರೋಗಿಗಳಿಗೆ ಚಿಕಿತ್ಸೆ ನೀಡುತ್ತದೆ. ಶೋಭನಾ ಅವರ ಉಚಿತ ಸೇವೆಯ ಮೂಲಕ ಈ ಬಡ ರೋಗಿಗಳು ಈಗ ತಿಂಗಳಿಗೆ ಒಂದು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಹಣ ಉಳಿಸಲು ಸಾಧ್ಯವಾಗಿದೆ. ಪ್ರತಿ ತಿಂಗಳು ಹೊಸದಾಗಿ 32 ಹೊಸ ರೋಗಿಗಳು ಸೇರ್ಪಡೆಯಾಗುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.
ಆರೈಕೆಯ ದೇವತೆ ಎಂದೇ ಜನಜನಿತ : ತನ್ನ ಅಣ್ಣನ ಪತ್ನಿಗೆ ಕ್ಯಾನ್ಸರ್ ಬಂದ ನಂತರ ಶೋಭನಾ ಅವರು ಹಾಸಿಗೆ ಹಿಡಿದ ರೋಗಿಗಳಿಗೆ ನೆರವಾಗಲು ಮುಂದಾಗಿದ್ದಾರೆ. ಜುಲೈ 1, 2006 ರಿಂದ ಪ್ರಾರಂಭವಾದ ಈ ಉಪಶಾಮಕ ಘಟಕವು ಗ್ರಾಮಕ್ಕೆ ನಿಜವಾದ ಆಸರೆಯಾಗಿದೆ. ವಿವಿಧ ಅಂಗಡಿಗಳಲ್ಲಿ ಅಳವಡಿಸಲಾಗಿರುವ ಕಾಯಿನ್ ಬಾಕ್ಸ್‌ಗಳ ಮೂಲಕ ಅವರು ಕೊಡುಗೆಗಳನ್ನು ಪಡೆಯುತ್ತಿದ್ದಾರೆ. ಉಪಶಾಮಕ ಘಟಕದ ಸದಸ್ಯರು ಸಹ ಇವರಿಗೆ ಕೊಡುಗೆ ನೀಡುತ್ತಿದ್ದಾರೆ. ಇದು ಇವರಿಗೆ ಆದಾಯದ ಮುಖ್ಯ ಮೂಲವಾಗಿದೆ. ಶೋಭನಾ ಅವರಿಂದ ಶುಶ್ರೂಷೆ ಪಡೆದವರು ಆಕೆಯ ಬಗ್ಗೆ ವರ್ಣಿಸಲು ಪದಗಳೇ ಸಾಕಾಗುತ್ತಿಲ್ಲ ಎಂದಿದ್ದಾರೆ. ಅನೇಕ ಜನರು ಅವರನ್ನು ಉಪಶಾಮಕ ಆರೈಕೆಯ ದೇವತೆ ಎಂದು ಪರಿಗಣಿಸುತ್ತಾರೆ. ಬಡವರು ಮತ್ತು ನಿರ್ಗತಿಕರ ಸೇವೆಗಾಗಿ ತನ್ನ ಜೀವನವನ್ನು ಸಮರ್ಪಿಸಿರುವ ಶೋಭನಾ ಮದುವೆಯಾಗುವುದನ್ನೇ ಮರೆತಿದ್ದಾರೆ.
ಇದನ್ನೂ ಓದಿ: ಗೊರವಂಕ ಹಕ್ಕಿಗೆ ಪುಟ್ಟ ಪೋರಿಯ ಆರೈಕೆ