ಹೈದರಾಬಾದ್: ಹೆಲಿಕಾಪ್ಟರ್ ಪತನವಾಗಿ ಸೇನಾಧಿಕಾರಿಗಳು ಸಾವನ್ನಪ್ಪಿರುವುದು ಇದೇ ಮೊದಲಲ್ಲ. ಈ ಹಿಂದೆ 1997 ಮತ್ತು 1993 ರಲ್ಲಿಯೂ ಕೂಡ ಇದೇ ರೀತಿಯ ಹೆಲಿಕಾಪ್ಟರ್ ದುರಂತಗಳು ಸಂಭವಿಸಿ ಸೇನಾ ಮುಖ್ಯಸ್ಥರು ಮತ್ತು ಸೇನಾಧಿಕಾರಿಗಳು ದಾರುಣ ಅಂತ್ಯ ಕಂಡಿದ್ದರು.
ಅದು 1997. ಐ.ಕೆ. ಗುಜ್ರಾಲ್ ಅವರು ಪ್ರಧಾನಮಂತ್ರಿಯಾಗಿದ್ದ ವೇಳೆ ರಕ್ಷಣಾ ಇಲಾಖೆಯ ರಾಜ್ಯ ಸಚಿವರಾಗಿದ್ದ ಎನ್.ವಿ. ಎನ್. ಸೋಮು, ಮೇಜರ್ ಜನರಲ್ ರಮೇಶ್ ಚಂದ್ರ ನಾಗ್ಪಾಲ್ ಮತ್ತು ಇಬ್ಬರು ಸೇನಾಧಿಕಾರಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅರುಣಾಚಲ ಪ್ರದೇಶದಲ್ಲಿ ಪತನಗೊಂಡಿತ್ತು. ಅಂದಿನ ಸೇನಾಧಿಕಾರಿಗಳು ಸಾವನ್ನಪ್ಪಿದ್ದರು. ಇದು ಕೂಡ ಬಹುದೊಡ್ಡ ದುರಂತ ಎಂದು ದಾಖಲಾಗಿದೆ.
ರಕ್ಷಣಾ ಇಲಾಖೆಯ ರಾಜ್ಯ ಸಚಿವರಾಗಿದ್ದ ಎನ್ವಿಎನ್ ಸೋಮು ಅವರು 1997ರಲ್ಲಿ ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ಸೈನಿಕರನ್ನುದ್ದೇಶಿಸಿ ಮಾತನಾಡಲು ತೆರಳುತ್ತಿದ್ದರು. ಈ ವೇಳೆ, ಚೀನಾದ ಗಡಿಭಾಗದ ಮಾಗೋ ಎಂಬಲ್ಲಿ ಹೆಲಿಕಾಪ್ಟರ್ ಪತನಗೊಂಡಿತ್ತು. ದುರಂತದಲ್ಲಿ ಸಚಿವರು, ಮೇಜರ್ ಜನರಲ್ ಮತ್ತು ಇಬ್ಬರು ಮೃತಪಟ್ಟಿದ್ದರು.
ಇದನ್ನೂ ಓದಿ: ಹೆಲಿಕಾಪ್ಟರ್ ಪತನದಲ್ಲಿ ಬಿಪಿನ್ ರಾವತ್ ನಿಧನ: ಶುಕ್ರವಾರ ಅಂತ್ಯಕ್ರಿಯೆ
ಇದಕ್ಕೂ ಮುನ್ನ 1993 ರಲ್ಲಿ ಭೂತಾನ್ನಲ್ಲಿ ಎಂಐ-17 ಹೆಲಿಕಾಪ್ಟರ್ ಪತನಗೊಂಡು ಭಾರತದ 8 ಮಂದಿ ಸೇನಾಧಿಕಾರಿಗಳು ಸಾವನ್ನಪ್ಪಿದ್ದರು.
ಬಳಿಕ, ಇದೀಗ ಭಾರತೀಯ ಮೂರು ಪಡೆಗಳ ಮುಖ್ಯಸ್ಥ(ಸಿಡಿಎಸ್) ಬಿಪಿನ್ ರಾವತ್ ಸೇರಿದಂತೆ ಸೇನಾಧಿಕಾರಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಮಿಳುನಾಡಿನ ಕೂನೂರಿನಲ್ಲಿ ಪತನಗೊಂಡು 13 ಜನರು ದಾರುಣವಾಗಿ ಮೃತಪಟ್ಟ ಘಟನೆ ಸೇನಾ ವಲಯದ ಅತಿದೊಡ್ಡ ದುರಂತವಾಗಿದೆ.