ಭೋಪಾಲ್, ಮಧ್ಯಪ್ರದೇಶ : ತಮಿಳುನಾಡಿನ ಕೂನೂರಿನಲ್ಲಿ ನಡೆದ ವಾಯುಪಡೆಯ ಹೆಲಿಕಾಪ್ಟರ್ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹಾಗೂ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಹುತಾತ್ಮರಾದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಸೇನಾ ಗೌರವಗಳೊಂದಿಗೆ ಮಧ್ಯಪ್ರದೇಶದ ಬೈರಗಢದ ವಿಶ್ರಾಮ್ ಘಾಟ್ನಲ್ಲಿ ನೆರವೇರಿಸಲಾಗಿದೆ.
ಅಂತ್ಯಕ್ರಿಯೆಯ ವೇಳೆ ವರುಣ್ ಸಿಂಗ್ ಪಾರ್ಥಿವ ಶರೀರದ ದರ್ಶನ ಪಡೆದು ಮಾತನಾಡಿದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಂಸ್ಥೆಯೊಂದಕ್ಕೆ ಅವರ ಹೆಸರಿಡುವುದು ಮತ್ತು ಅವರ ಸ್ಮರಣಾರ್ಥ ಪ್ರತಿಮೆಯೊಂದನ್ನು ಸ್ಥಾಪನೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ವರುಣ್ ಸಿಂಗ್ ಕುಟುಂಬದೊಂದಿಗೆ ಚರ್ಚೆ ನಡೆಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದರೊಂದಿಗೆ ವರುಣ್ ಸಿಂಗ್ ಅವರ ಕುಟುಂಬಸ್ಥರಿಗೆ 1 ಕೋಟಿ ರೂಪಾಯಿ ಪರಿಹಾರವನ್ನು ರಾಜ್ಯ ಸರ್ಕಾರ ನೀಡುತ್ತದೆ. ವರುಣ್ ಸಿಂಗ್ ಅವರು ಭಾರತ ಮಾತೆಯ ನಿಜವಾದ ಪುತ್ರ ಮತ್ತು ಅವರ ಬಗ್ಗೆ ದೇಶವು ಹೆಮ್ಮೆಪಡುತ್ತದೆ ಎಂದು ಅಭಿಪ್ರಾಯಪಟ್ಟರು. ವರುಣ್ ಸಿಂಗ್ ಕುಟುಂಬದ ಸದಸ್ಯರಲ್ಲಿ ಒಬ್ಬರನ್ನು ಸರ್ಕಾರಿ ಸೇವೆಗಳಲ್ಲಿ ನೇಮಿಸಿಕೊಳ್ಳುವ ಪ್ರಸ್ತಾಪವೂ ಇದೆ ಎಂದು ಮಧ್ಯಪ್ರದೇಶ ಸಿಎಂ ಹೇಳಿದರು.
ಡಿಸೆಂಬರ್ 8ರಂದು ಸಂಭವಿಸಿದ ಕೂನೂರು ಹೆಲಿಕಾಪ್ಟರ್ ಅಪಘಾತದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಜನರು ಸಾವನ್ನಪ್ಪಿದ್ದು, ಗ್ರೂಪ್ ಕ್ಯಾಪ್ಟನ್ ಆಗಿದ್ದ ವರುಣ್ ಸಿಂಗ್ ಬದುಕುಳಿದಿದ್ದರು. ಬೆಂಗಳೂರಿನ ಮಿಲಿಟರಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಡಿಸೆಂಬರ್ 15ರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ವರುಣ್ ಸಿಂಗ್ ಹುತಾತ್ಮರಾಗಿದ್ದರು.
ಇನ್ನು ವರುಣ್ ಸಿಂಗ್ ಅವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ತಮಿಳುನಾಡಿನ ವೆಲ್ಲಿಂಗ್ಟನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ ತಂದೆ ಕರ್ನಲ್ ಕೆಪಿ ಸಿಂಗ್, ನಿವೃತ್ತ ಸೇನಾಧಿಕಾರಿಯಾಗಿದ್ದು, ಅವರ ತಾಯಿ ಉಮಾ ಸಿಂಗ್ ಭೋಪಾಲ್‌ನಲ್ಲಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ: ಹಕ್ಕಿ ಜ್ವರ ಭೀತಿ: ಕೇರಳದಲ್ಲಿ ಸಾವಿರಾರು ಬಾತುಕೋಳಿಗಳ ಮಾರಣ ಹೋಮಕ್ಕೆ ರೈತರು ಕಂಗಾಲು