ರುದ್ರಾಪುರ (ಉತ್ತರಾಖಂಡ್): ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಯೋಧನ ಪತ್ನಿಯ ಮೇಲೆ ಮನೆಯ ಮಾಲೀಕ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ವೃತ್ತಿಯಲ್ಲಿ ಶಿಕ್ಷಕನಾಗಿದ್ದು, ಸದ್ಯ ಪೊಲೀಸರು ಬಂಧಿಸಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಉತ್ತರಾಖಂಡದ ರುದ್ರಾಪುರ ಎಂಬಲ್ಲಿ ಯೋಧ ಮತ್ತು ಆತನ ಪತ್ನಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಈ ವೇಳೆ ಜನವರಿ 15ರಂದು ಮನೆ ಮಾಲೀಕರ ಕುಟುಂಬ ಸದಸ್ಯರು ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ಮಾಲೀಕರು ಒಬ್ಬರೇ ಇದ್ದರು.
ಯೋಧನ ಪತ್ನಿ ಮೇಲೆ ಅತ್ಯಾಚಾರಕ್ಕೆ ಯತ್ನ : ಇದೇ ಸಮಯದಲ್ಲಿ ಯೋಧನು ಕರ್ತವ್ಯಕ್ಕೆ ಹೋಗಿದ್ದಾನೆ. ಈ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡ ಮನೆ ಮಾಲೀಕ ಯೋಧನ ಪತ್ನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಯೋಧನ ಪತ್ನಿಯು ತನ್ನ ಕುಟುಂಬ ಸದಸ್ಯರೊಂದಿಗೆ ವಿಡಿಯೋ ಕರೆಯಲ್ಲಿ ಮಾತನಾಡುತ್ತಿರುವಾಗ ಮನೆಯ ಟೆರೇಸ್‌ಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಕುಟುಂಬಸ್ಥರು ವಿಡಿಯೋ ಕಾಲ್‌ನಲ್ಲಿ ಆರೋಪಿ ದೌರ್ಜನ್ಯ ಎಸಗುತ್ತಿದ್ದನ್ನು ಕಂಡಿದ್ದಾರೆ. ತಕ್ಷಣ ಅವರು ಯೋಧನಿಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದ್ದಾರೆ. ಯೋಧ ಸ್ಥಳಕ್ಕಾಗಮಿಸಿದಾಗ ಆರೋಪಿ ಮಹಿಳೆ ಮೇಲೆ ಹಲ್ಲೆ ನಡೆಸಲು ಯತ್ನಿಸುತ್ತಿದ್ದ ಎಂದು ತಿಳಿದು ಬಂದಿದೆ. ತಕ್ಷಣ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಈ ವೇಳೆ, ಮಹಿಳೆ ತನ್ನನ್ನು ತಾನು ರಕ್ಷಿಸಕೊಳ್ಳಲು ಆರೋಪಿಯ ಮೂಗಿಗೆ ಕಚ್ಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಸಂತ್ರಸ್ತೆ ನೀಡಿದ ದೂರಿನ ಮೇಲೆ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಬೊಟಾಡ್ (ಗುಜರಾತ್): ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಗುಜರಾತ್ನ ಬೊಟಾಡ್ನಲ್ಲಿ ನಡೆದಿದೆ. ಇಲ್ಲಿನ ಭಗವಾನ್ ಪೋರ್ ಪ್ರದೇಶದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಭಾನುವಾರದಂದು ಸಂಕ್ರಾಂತಿ ಹಿನ್ನೆಲೆ ಸಂಜೆ ಹೊತ್ತಿಗೆ ಬಿದ್ದು ಸಿಗುವ ಗಾಳಿಪಟಗಳನ್ನು ಸಂಗ್ರಹಿಸಲು ಬಾಲಕಿಯು ಮನೆಯಿಂದ ಹೊರಟಿದ್ದಳು. ಆದರೆ, ಸಂಜೆಯವರೆಗೂ ಬಾಲಕಿ ಮನೆಗೆ ವಾಪಸ್ ಬಾರದ ಹಿನ್ನೆಲೆ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಎಲ್ಲೂ ಪತ್ತೆಯಾಗದಾಗ ಆತಂಕಗೊಂಡ ಬಾಲಕಿಯ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅತ್ಯಾಚಾರ ಖಂಡಿಸಿ ಪ್ರತಿಭಟನೆ: ಘಟನೆ ಸಂಬಂಧ ತನಿಖೆ ನಡೆಸಿದ ಪೊಲೀಸರಿಗೆ ಭಗವಾನ್‌ಪೋರ್ ಪ್ರದೇಶದ ನಿರ್ಜನ ಪ್ರದೇಶದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಇನ್ನು ಬಾಲಕಿಯ ಬಾಯಿಗೆ ಪ್ಲಾಸ್ಟಿಕ್ ಹಾಕಿದ್ದು, ಅತ್ಯಾಚಾರ ಮಾಡಿ ಕೊಲೆ ಮಾಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಬಾಲಕಿಯ ಮೃತದೇಹ ಪತ್ತೆಯಾದ ಹಿನ್ನೆಲೆ ಸ್ಥಳೀಯರು ಬಾಲಕಿಯ ಅತ್ಯಾಚಾರವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಈ ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಇನ್ನು ಪ್ರಾಥಮಿಕ ತನಿಖೆಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಕಂಡುಬಂದಿದೆ.ಬಳಿಕ ಬಾಲಕಿಯನ್ನು ಕೊಲೆ ಮಾಡಿರಬಹುದು. ಸದ್ಯ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೋನಾವಾಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಬೋಟಾಡ್ ಎಸ್ಪಿ ಕಿಶೋರ್ ಬಲೋಲಿಯ ತಿಳಿಸಿದ್ದಾರೆ.
ಇದನ್ನೂ ಓದಿ : ಬಿಹಾರದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಓರ್ವನ ಬಂಧನ