ಲಖಿಂಪುರ್ ಖೇರಿ (ಉತ್ತರಪ್ರದೇಶ): ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾ ಅಪರಾಧ ವಿಭಾಗದ ಅಧಿಕಾರಿಗಳ (Crime Branch) ಮುಂದೆ ಹಾಜರಾಗಿದ್ದಾರೆ. ಈ ಹಿನ್ನೆಲೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ನಿನ್ನೆಯಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಇಂದು ಕೈ ಬಿಟ್ಟಿದ್ದಾರೆ.
ಶುಕ್ರವಾರ (ನಿನ್ನೆ) ಗಲಭೆಗೆ ಕಾರಣರಾಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಉಪವಾಸ ಸತ್ಯಾಗ್ರಹ ಮುಂದುವರೆಸುವುದಾಗಿ ಸಿಧು ಹೇಳಿದ್ದರು.
ಈ ಕುರಿತು ಟ್ವೀಟ್ ಮಾಡಿದ್ದ ಅವರು, ನ್ಯಾಯದಾನ ವಿಳಂಬ - ನ್ಯಾಯ ನಿರಾಕರಿಸಲಾಗಿದೆ. ಕೆಚ್ಚೆದೆಯ ಕುಟುಂಬದ ಲವ್ ಪ್ರೀತ್ ಸಿಂಗ್ (20), ಕೇಂದ್ರ ಸಚಿವರ ಮಗನ ಕ್ರೂರತ್ವಕ್ಕೆ ಬಲಿಯಾಗಿದ್ದಾರೆ ಎಂದು ಬರೆದುಕೊಂಡಿದ್ದರು. ಗುರುವಾರ ಲಖಿಂಪುರ್ ಖೇರಿಗೆ ಮೆರವಣಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ನವಜೋತ್ ಸಿಂಗ್ ಸಿಧು ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ: ಲಖಿಂಪುರ ಹಿಂಸಾಚಾರ: ಪೊಲೀಸರ ಮುಂದೆ ಹಾಜರಾದ ಕೇಂದ್ರ ಸಚಿವರ ಪುತ್ರ
ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಕಾರೊಂದು ಪ್ರತಿಭಟನಾಕಾರರತ್ತ ನುಗ್ಗಿತ್ತು. ಈ ಸಮಯದಲ್ಲಿ ನಾಲ್ವರು ರೈತರು ಮೃತಪಟ್ಟಿದ್ದರು. ಪ್ರತಿಭಟನಾಕಾರರು ಇಬ್ಬರು ಬಿಜೆಪಿ ಕಾರ್ಯಕರ್ತರು ಹಾಗೂ ಕಾರು ಚಾಲಕನನ್ನು ಹತ್ಯೆ ಮಾಡಿದ್ದರು ಎನ್ನಲಾಗಿದೆ. ಘಟನೆಯಲ್ಲಿ ಓರ್ವ ಪತ್ರಕರ್ತ ಮೃತಪಟ್ಟಿದ್ದ.