ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕೋಲ್ಕತ್ತಾದ ಉತ್ತರ ಹೊರವಲಯದಲ್ಲಿ ಆಯೋಜನೆ ಮಾಡಲಾಗಿರುವ ದುರ್ಗಾ ಪೂಜೆಯಲ್ಲಿ ಲಖೀಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರ ಹಾಗೂ ರೈತರ ಪ್ರತಿಭಟನೆಯ ಕಲಾಕೃತಿಗಳನ್ನು ರಚಿಸಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಕೋಲ್ಕತ್ತಾದ ಉತ್ತರ ಹೊರವಲಯದಲ್ಲಿನ ದಮ್ ದಮ್ ಪಾರ್ಕ್‌ನಲ್ಲಿ ಸಮುದಾಯ ಕ್ಲಬ್ ವಿಭಿನ್ನವಾದ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು ದುರ್ಗಾ ಪೂಜೆ ಆಯೋಜನೆ ಮಾಡಿದೆ. ಈ ಬಾರಿ ''ನಾವು ನಮ್ಮ ಭತ್ತ ಅಥವಾ ನಮ್ಮ ಸ್ವಾಭಿಮಾನವನ್ನು ಬಿಟ್ಟುಕೊಡುವುದಿಲ್ಲ'' ಎಂಬ ಘೋಷವಾಕ್ಯದೊಂದಿದೆ ದುರ್ಗಾ ಪೂಜೆ ನಡೆಯುತ್ತಿದೆ. ಲಖೀಂಪುರ್ ಖೇರಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮತ್ತು ಹಿಂಸಾತ್ಮಕ ಘಟನೆಯಂತಹ ಸಮಕಾಲೀನ ಸಮಸ್ಯೆಗಳನ್ನು ಅಳವಡಿಸಿಕೊಂಡಿದೆ. ಕಲಾವಿದ ಅನಿರ್ಬನ್ ಅವರು ಈ ಥೀಮ್ ಸಿದ್ಧಪಡಿಸಿದ್ದಾರೆ.
ಪೂಜಾ ಪೆಂಡಲ್ನ ಪ್ರವೇಶದ್ವಾರದಲ್ಲಿ ಟ್ರ್ಯಾಕ್ಟರ್ಗೆ ದೊಡ್ಡ ರೆಕ್ಕೆಗಳನ್ನು ಅವಳಡಿಸಲಾಗಿದೆ. ಆಂದೋಲನ ಮತ್ತು ಚಳವಳಿಗಾರರ ಹೆಸರುಗಳನ್ನು ಹೊಂದಿರುವ ಸಣ್ಣ ಕಾಗದದ ತುಂಡುಗಳನ್ನು ರೆಕ್ಕೆಗಳಿಗೆ ಅಂಟಿಸಲಾಗಿದೆ. ಹರಿದ ಚಪ್ಪಲಿ ಅಥವಾ ಪಾದದ ಗುರುತುಗಳನ್ನು ಪೆಂಡಲ್ನ ಒಳ ಗೋಡೆಗೆ ಅಂಟಿಸಲಾಗಿದೆ. ಎರಡು ನೈಜ ಟೈರ್‌ಗಳೊಂದಿಗೆ ಲಗತ್ತಿಸಲಾದ ಮುದ್ರಿತ ಕಾರು, ರೈತರು ಓಡಿ ಹೋಗುತ್ತಿರುವುದನ್ನು ತೋರಿಸಲಾಗಿದೆ. ಈ ಮೂಲಕ ಯುಪಿಯ ಲಖಿಂಪುರ್ ಖೇರಿಯಲ್ಲಿ ಇತ್ತೀಚೆಗೆ ನಡೆದ ಘಟನೆಯನ್ನು ಎತ್ತಿ ತೋರಿಸುತ್ತದೆ.
ಈ ವರ್ಷದ ಪೂಜೆಯ ವಿಷಯಕ್ಕೆ ಯಾವುದೇ ರಾಜಕೀಯ ಸಂಬಂಧವಿಲ್ಲ. ನಾವು ಇದನ್ನು ಮಾನವೀಯ ದೃಷ್ಟಿಕೋನದಿಂದ ನೋಡುತ್ತಿದ್ದೇವೆ ಎಂದು ಸಮಿತಿಯ ಪದಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಪತ್ರಕರ್ತ ಕಶ್ಯಪ್ ನಿವಾಸದಲ್ಲಿ ನವಜೋತ್ ಸಿಂಗ್ ಸಿಧು ಉಪವಾಸ ಸತ್ಯಾಗ್ರಹ