ಬೆಂಗಳೂರು: ಕೋವಿಡ್ನಿಂದ ಮೃತಪಟ್ಟವರ ಕುಟುಂಬ ಮತ್ತು ಮಕ್ಕಳಿಗೆ ಹಲವರು ನೆರವಿಗೆ ಬಂದಿದ್ದರು. ಆದ್ರೆ ಇದೀಗ ಕೇಂದ್ರೀಯ ವಿದ್ಯಾಲಯ ಕೂಡ ಕೋವಿಡ್ಗೆ ಬಲಿಯಾದವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದೆ. ಕೇಂದ್ರದ ಸೂಚನೆ ಮೇರೆಗೆ ಕೇಂದ್ರೀಯ ವಿದ್ಯಾಲಯ ಈ ನಿರ್ಧಾರ ಕೈಗೊಂಡಿದ್ದು, ದೇಶಾದ್ಯಂತ ಕೋವಿಡ್ ಸಂತ್ರಸ್ತ ಮಕ್ಕಳು ಉಚಿತ ಪ್ರವೇಶ ಪಡೆಯಲಿದ್ದಾರೆ.
ಕೋವಿಡ್ಗೆ ಬಲಿಯಾದ ಪೋಷಕರ ಮಕ್ಕಳಿಗೆ ರಕ್ಷಣೆ ಮತ್ತು ಶಿಕ್ಷಣ ಕೊಡುವ ಜೊತೆಗೆ ಸ್ವಾವಲಂಬಿಯಾಗಿಸುವ ಪಿಎಂ ಕೇರ್ಸ್ನ ಮಕ್ಕಳ ಯೋಜನೆಗಳಡಿ ಕೇಂದ್ರೀಯ ವಿದ್ಯಾಲಯವು ಉಚಿತ ಪ್ರವೇಶಾತಿ ನೀಡಲು ತೀರ್ಮಾನಿಸಿದೆ.
ವಯಸ್ಸಿನ ಆಧಾರದ ಮೇಲೆ ಈ ಮಕ್ಕಳಿಗೆ 1 ರಿಂದ 12ನೇ ತರಗತಿ ವರೆಗೆ ಉಚಿತ ಪ್ರವೇಶಾತಿ ನೀಡಲಿದ್ದೇವೆ. ಟೂಷನ್ ಶುಲ್ಕ, ವಿದ್ಯಾಲಯ ವಿಕಾಸ್ ನಿಧಿ ಶುಲ್ಕ ಸೇರಿ ಪೂರ್ತಿ ಶಿಕ್ಷಣ ಉಚಿತವಾಗಿರಲಿದೆ. ಜಿಲ್ಲಾಡಳಿತ ವರದಿ ಆಧರಿಸಿ ಕೆವಿ ಪ್ರವೇಶಾತಿ ನೀಡಲಿದೆ. ಪ್ರತಿ ಶಾಲೆಗೆ ಕನಿಷ್ಠ 10 ವಿದ್ಯಾರ್ಥಿಗಳವರೆಗೆ ಶಿಫಾರಸು ಮಾಡಲು ಜಿಲ್ಲಾಧಿಕಾರಿಗೆ ಅವಕಾಶ ಇದೆ ಎಂದು ಕೇಂದ್ರೀಯ ವಿದ್ಯಾಲಯ ಮಾಹಿತಿ ನೀಡಿದೆ.
ಮಹಾಮಾರಿ ಕೋವಿಡ್ನಿಂದ ಹಲವು ಮಕ್ಕಳು ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡಿದ್ದಾರೆ. ಅಂತೆಯೇ ಈಗಾಗಲೇ ಹಲವು ಸಂಘ-ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಈ ಮಕ್ಕಳ ಆಸರೆಗೆ ನಿಂತಿವೆ. ಇದೀಗ ಕೇಂದ್ರೀಯ ವಿದ್ಯಾಲಯ ಕೂಡ ಅದೇ ಹೆಜ್ಜೆಯನ್ನಿಟ್ಟಿದೆ.
(ಇದನ್ನೂ ಓದಿ: ಕೇಂದ್ರೀಯ ವಿದ್ಯಾಲಯದಲ್ಲಿ ಸಂಸದರ ಕೋಟಾ ರದ್ದುಗೊಳಿಸಿದ ಕೇಂದ್ರ ಸರ್ಕಾರ!)