ಹರಿದ್ವಾರ (ಉತ್ತರಾಖಂಡ): ಉತ್ತರಾಖಂಡದ ಹರ್ ಕಿ ಪೌರಿಯ ಗಂಗಾ ನದಿಯಲ್ಲಿ ಪವಿತ್ರ ಶಾಹಿ ಸ್ನಾನ ಮಾಡಲು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ. ಆದರೆ ಎರಡನೇ 'ಶಾಹಿ ಸ್ನಾನ್' ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಯುವುದು ಕಷ್ಟಸಾಧ್ಯ ಎಂದು ಕುಂಭಮೇಳ ಇನ್ಸ್‌ಪೆಕ್ಟರ್ ಜನರಲ್ (ಐಜಿ) ಸಂಜಯ್ ಗುಂಜ್ಯಾಲ್ ಅಸಹಾಯಕ ನುಡಿಗಳನ್ನಾಡಿದ್ದಾರೆ.
"ಕೊರೊನಾ ಮಾರ್ಗಸೂಚಿ ಅನುಸರಿಸಲು ನಾವು ಜನರಿಗೆ ನಿರಂತರವಾಗಿ ಮನವಿ ಮಾಡುತ್ತಿದ್ದೇವೆ. ಆದರೆ ಹೆಚ್ಚಿನ ಜನಸಂದಣಿಯಿಂದಾಗಿ, ಇಂದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಘಾಟ್‌ಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಲು ಮುಂದಾದರೆ ಜನರು ಕಾಲ್ತುಳಿತದಂತಹ ಪರಿಸ್ಥಿತಿಗೆ ಒಳಗಾಗಬಹುದು" ಎಂದು ಗುಂಜ್ಯಾಲ್ ಕಳವಳ ವ್ಯಕ್ತಪಡಿಸಿದರು.
ಬೆಳಿಗ್ಗೆ 7 ಗಂಟೆಯವರೆಗೆ ಸಾರ್ವಜನಿಕರಿಗೆ ಇಲ್ಲಿ ಅವಕಾಶ ನೀಡಲಾಗುವುದು. ಬಳಿಕ ಈ ಪ್ರದೇಶವನ್ನು ಸಾಧುಗಳಿಗಾಗಿ ಕಾಯ್ದಿರಿಸಲಾಗಿದೆ ಎಂದರು.
ಮಹಾಶಿವರಾತ್ರಿ ಸಂದರ್ಭದಲ್ಲಿ ಮಾರ್ಚ್ 11ರಂದು ಮೊದಲ ಶಾಹಿ ಸ್ನಾನವನ್ನು ನಡೆಸಲಾಯಿತು. ಇಂದು ಎರಡನೇ ಸ್ನಾನ ಮತ್ತು ಏಪ್ರಿಲ್ 14 ರಂದು ಮೂರನೇ ಶಾಹಿ ಸ್ನಾನ ನಡೆಯಲಿದೆ.
ಉತ್ತರಖಂಡದ ಕೋವಿಡ್ ವರದಿ
ಉತ್ತರಾಖಂಡದಲ್ಲಿ ಭಾನುವಾರದಂದು 1,333 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,08,812 ಕ್ಕೆ ತಲುಪಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 7,323 ರಷ್ಟಿದೆ.