ಕೊಟ್ಟಾಯಂ(ಕೇರಳ): ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಕೇರಳದ ತಿರುವಾತುಕ್ಕಲ್‌ನಲ್ಲಿರುವ ನದಿಗೆ ಉರುಳಿ ಬಿದ್ದಿರುವ ಘಟನೆ ನಡೆದಿದೆ. ಪವಾಡ ಸದೃಶ ರೀತಿಯಲ್ಲಿ ಆರು ತಿಂಗಳ ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ನದಿಗೆ ಉರುಳಿ ಬಿದ್ದಿರುವ ಶಬ್ಧ ಕೇಳಿ ಸ್ಥಳೀಯರು ತಕ್ಷಣವೇ ಘಟನಾ ಸ್ಥಳಕ್ಕಾಗಮಿಸಿದ್ದರು. ಈ ಸಂದರ್ಭ ಕಾರು ನೀರಿನಲ್ಲಿ ತೇಲುತ್ತಿರುವುದು ಕಂಡುಬಂದಿದ್ದು, ಅದರೊಳಗೆ ಇದ್ದವರನ್ನು ರಕ್ಷಿಸಿ ಹೊರತೆಗೆದಿದ್ದಾರೆ.
ಇದನ್ನೂ ಓದಿ: ವಿಶೇಷ ಸ್ಥಾನಮಾನ ರದ್ಧತಿ ಎಫೆಕ್ಟ್: ಕಾಶ್ಮೀರದಲ್ಲಿ ಗಲಭೆ ಪ್ರಕರಣ ಶೇ 88ರಷ್ಟು ಇಳಿಕೆ
ಕಾರು ನದಿಯಲ್ಲಿ ಮುಳುಗಲು ಶುರುವಾಗ್ತಿದ್ದಂತೆ ಅದರೊಳಗಿದ್ದವರು ಸಹಾಯಕ್ಕಾಗಿ ಕಿರುಚಾಡಿದ್ದು, ಹಗ್ಗಗಳ ಸಹಾಯದಿಂದ ರಕ್ಷಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದರು. ಮಳೆಯಾಗುತ್ತಿದ್ದ ಕಾರಣ ಚಾಲಕನಿಗೆ ರಸ್ತೆ ಸರಿಯಾಗಿ ಕಾಣಿಸಿಲ್ಲ. ಹೀಗಾಗಿ, ಕಾರು ನದಿಗೆ ಉರುಳಿದೆ ಎಂದು ಹೇಳಲಾಗ್ತಿದೆ.
ಘಟನೆಯಲ್ಲಿ ಶಿಶು ಸೇರಿದಂತೆ ಯಾರಿಗೂ ಗಾಯಗಳಾಗಿಲ್ಲ. ಕಾರಿನ ಎಲ್ಲ ಗಾಜುಗಳು ಬಂದ್ ಆಗಿದ್ದರಿಂದ ಹೆಚ್ಚಿನ ನೀರು ಪ್ರವೇಶಿಸಿಲ್ಲ ಎಂದು ಸ್ಥಳೀಯರು ಹೇಳಿದರು. ಈ ಕುಟುಂಬ ಎರ್ನಾಕುಲಂನಿಂದ ತಿರುವಲ್ಲಾಗೆ ಪ್ರಯಾಣಿಸುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ.