ಕೋಟಾ (ರಾಜಸ್ಥಾನ): ಕೋಟಾ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದರು. ತಮ್ಮ ಮಗಳ ಸಾವಿಗೆ ಸಂಸ್ಥೆಯ ಕಿರುಕುಳ ಕಾರಣ ಎಂದು ಆರೋಪಿಸಿ ವಿದ್ಯಾರ್ಥಿನಿಯ ತಂದೆ ಕೋಚಿಂಗ್ ಸೆಂಟರ್ ವಿರುದ್ದ ದೂರು ನೀಡಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಕೋಚಿಂಗ್ ಸೆಂಟರ್ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮೂಲದ 16 ವರ್ಷದ ವಿದ್ಯಾರ್ಥಿನಿ ಕಳೆದ ಸೋಮವಾರ ಈ ಕೋಚಿಂಗ್ ಸೆಂಟರ್‌ನಲ್ಲಿ ಕೀಟನಾಶಕ ಸೇವಿಸಿ ಸಾವನ್ನಪ್ಪಿದ್ದಳು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಪಡೆಯಲು ಮಂಗಳವಾರ ಕೋಟಾಕ್ಕೆ ಆಗಮಿಸಿದ ವಿದ್ಯಾರ್ಥಿನಿಯ ತಂದೆ ಸೂರ್ಯಪ್ರಕಾಶ್ ಸಿಂಗ್, ತರಬೇತಿ ಸಂಸ್ಥೆ ತಮ್ಮ ಮಗಳ ಮೇಲೆ ಅಧ್ಯಯನಕ್ಕಾಗಿ ಹೆಚ್ಚಿನ ಒತ್ತಡ ಹೇರಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಮಗಳ ಸಾವಿಗೆ ಸಂಸ್ಥೆಯನ್ನು ಹೊಣೆಗಾರರನ್ನಾಗಿಸಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306ರ ಅಡಿಯಲ್ಲಿ ವಿಜ್ಞಾನ ನಗರದಲ್ಲಿರುವ ಸಂಸ್ಥೆಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ ಎಂದು ಡಿಎಸ್‌ಪಿ ಧರ್ಮವೀರ್ ಸಿಂಗ್ ತಿಳಿಸಿದ್ದಾರೆ. ಅನುಮಾನಾಸ್ಪದ ಆತ್ಮಹತ್ಯೆಗೆ ಪ್ರೇಮ ಸಂಬಂಧ ಕಾರಣ ಎಂದು ಹೇಳಲಾದ ವಾಟ್ಸ್ಆ್ಯಪ್ ಸಂದೇಶಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಎಸ್‌ಪಿ "ಪೊಲೀಸರು ಅಂತಹ ಯಾವುದೇ ಸಂದೇಶಗಳನ್ನು ನೋಡಿಲ್ಲ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ" ಎಂದರು.
ಶವಾಗಾರದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮೃತ ವಿದ್ಯಾರ್ಥಿನಿಯ ತಂದೆ ಸೂರ್ಯಪ್ರಕಾಶ್, ಇನ್‌ಸ್ಟಿಟ್ಯೂಟ್‌ನಲ್ಲಿನ ಶಿಕ್ಷಕರು ತಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಅವಳು ಅಧ್ಯಯನದಲ್ಲಿ ಹಿಂದುಳಿದಿದ್ದಾಳೆ. ಫೇಲ್ ಆಗುತ್ತಾಳೆ ಎಂದು ಒತ್ತಡ ಹೇರಿದರು ಎಂದು ದೂರಿದರು.
ಕೋಚಿಂಗ್ ಇನ್‌ಸ್ಟಿಟ್ಯೂಟ್ ಸಿಬ್ಬಂದಿ ಕೋಟಾ ಆಡಳಿತವನ್ನು ಸಂಪರ್ಕಿಸದಂತೆ ಫೋನ್‌ನಲ್ಲಿ ಬೆದರಿಕೆ ಹಾಕಿದರು ಎಂದು ವಿದ್ಯಾರ್ಥಿನಿಯ ತಂದೆ ಆರೋಪಿಸಿದ್ದಾರೆ. ಸೂರ್ಯಪ್ರಕಾಶ್ ಅವರು ಕರೆ ಸ್ವೀಕರಿಸಿದ ದೂರವಾಣಿ ಸಂಖ್ಯೆಯನ್ನು ಜಿಲ್ಲಾಡಳಿತ ಮತ್ತು ಪೊಲೀಸರಿಗೆ ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತ ವಿದ್ಯಾರ್ಥಿನಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಳೆದ ಒಂದೂವರೆ ವರ್ಷಗಳಿಂದ ವಿಜ್ಞಾನ ನಗರದಲ್ಲಿರುವ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ನೀಟ್-ಯುಜಿಗೆ ತಯಾರಿ ನಡೆಸುತ್ತಿದ್ದಳು ಎಂದು ಡಿಎಸ್‌ಪಿ ತಿಳಿಸಿದ್ದಾರೆ.
"ಕೋಚಿಂಗ್ ಇನ್ಸ್ಟಿಟ್ಯೂಟ್ ಹೊರಗೆ ಬಾಲಕಿ ವಾಂತಿ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಇತರ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ ಸೋಮವಾರ ಸಂಜೆ ಚಿಕಿತ್ಸೆ ಫಲಿಸದೆ ಆಕೆ ಸಾವನ್ನಪ್ಪಿದ್ದಳು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಮಂಗಳವಾರ ಮಧ್ಯಾಹ್ನ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ವಿದ್ಯಾರ್ಥಿನಿಯ ಕೊಠಡಿಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಇನ್‌ಸ್ಟಿಟ್ಯೂಟ್ ವಿರುದ್ಧ ಆಕೆಯ ಪೋಷಕರ ಆರೋಪ ಮತ್ತು ಬಾಲಕಿ ಕೀಟನಾಶಕವನ್ನು ಹೇಗೆ ಪಡೆದುಕೊಂಡಿದ್ದಾಳೆ? ಎಂಬುದರ ಕುರಿತು ತನಿಖೆ ನಡೆಯುತ್ತಿದೆ"- ಕೋಟಾ ಸಿಟಿ ಎಎಸ್ಪಿ ಭಗವತ್ ಸಿಂಗ್.
ಇದನ್ನೂ ಓದಿ: ಕೋಟಾದಲ್ಲಿ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ