ಕೋಲ್ಕತ್ತಾ (ಪಶ್ಚಿಮಬಂಗಾಳ) : ದೇಶದ ಸೂಕ್ಷ್ಮ ವಿಚಾರ ಮತ್ತು ಹಲವು ನಗರಗಳ ಚಿತ್ರ, ವಿಡಿಯೋಗಳನ್ನು ಪಾಕಿಸ್ತಾನದ ಮಹಿಳೆಯ ಜೊತೆಗೆ ಹಂಚಿಕೊಂಡ ಆರೋಪದ ಮೇಲೆ ಬಿಹಾರದ ವ್ಯಕ್ತಿಯೊಬ್ಬನನ್ನು ಕೋಲ್ಕತ್ತಾ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಶನಿವಾರ ಬಂಧಿಸಿದೆ. ಆರೋಪಿಯನ್ನು ಭಕ್ತ ವಂಶಿ ಝಾ ಎಂದು ಗುರುತಿಸಲಾಗಿದೆ. ಈತ ಸಂಪರ್ಕ ಹೊಂದಿದ್ದ ಮಹಿಳೆ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಗೂಢಾಚಾರಣಿ ಎಂದು ಗುರುತಿಸಲಾಗಿದೆ.
ಆರೋಪಿ ವಂಶಿ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ನಂತರ ಹಲವಾರು ಮತದಾರರ ಕಾರ್ಡ್‌ಗಳು ಮತ್ತು ಆಧಾರ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ವ್ಯಕ್ತಿ ಪಾಕಿಸ್ತಾನಕ್ಕೆ ಹೋಗಿದ್ದಾರೋ ಅಥವಾ ಪಾಕಿಸ್ತಾನಿ ಮಹಿಳೆ ಭಾರತಕ್ಕೆ ಭೇಟಿ ನೀಡಿದ್ದಾಳೋ ಎಂಬ ಬಗ್ಗೆ ವಿಚಾರಣೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಮುಖ ನಗರಗಳಿಗೆ ಭೇಟಿ ನೀಡಿದ್ದ ಆರೋಪಿ: ಪಾಕ್ ಮಹಿಳೆಯ ನಿರ್ದೇಶನದ ಮೇರೆಗೆ ಆರೋಪಿ ವಂಶಿ ಮುಂಬೈ, ದೆಹಲಿ ಮತ್ತು ಕೋಲ್ಕತ್ತಾ ಸೇರಿದಂತೆ ದೇಶದ ಹಲವು ಪ್ರಮುಖ ನಗರಗಳಿಗೆ ಭೇಟಿ ನೀಡಿ, ಅಲ್ಲಿನ ಸ್ಥಳಗಳ ಚಿತ್ರ ಮತ್ತು ವಿಡಿಯೋಗಳನ್ನು ಸೆರೆ ಹಿಡಿದಿದ್ದ. ಬಳಿಕ ಆಕೆಗೆ ರವಾನಿಸಿದ್ದ. ಇವುಗಳನ್ನು ಆಕೆ ಪಾಕಿಸ್ತಾನಿ ಗುಪ್ತಚರ ಸಂಸ್ಥೆಯೊಂದಿಗೆ ಹಂಚಿಕೊಂಡಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.
ವ್ಯಕ್ತಿಯ ಅನುಮಾನಾಸ್ಪದ ಚಲನವಲನಗಳ ನಂತರ ಹೆಚ್ಚಿನ ತನಿಖೆಗಾಗಿ ಕೋಲ್ಕತ್ತಾ ಪೊಲೀಸ್, ಎಸ್‌ಟಿಎಫ್ ಪಡೆಯನ್ನು ಬಿಹಾರಕ್ಕೆ ಕಳುಹಿಸಲಾಗಿತ್ತು. ಅಲ್ಲಿ ಶಂಕಿತ ಆರೋಪಿಯನ್ನು ಟ್ರಾನ್ಸಿಟ್ ರಿಮಾಂಡ್ ಮೇಲೆ ಕೋಲ್ಕತ್ತಾಗೆ ಕರೆತರಲಾಗುತ್ತಿದೆ. ಪ್ರಕರಣ ಸಂಬಂಧ ಕೋಲ್ಕತ್ತಾ ಪೊಲೀಸರು ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು (ಎನ್‌ಐಎ) ಸಂಪರ್ಕಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪಾಕ್ಗೆ ಸಾಫ್ಟ್‌ವೇರ್ ಮೂಲಕ ಚಿತ್ರ ರವಾನೆ: ಆರೋಪಿತ ವ್ಯಕ್ತಿ ವಂಶಿ ಝಾ ದೆಹಲಿ ಮೂಲದ ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸಕ್ಕೆ ಸಂಬಂಧಿಸಿದ ವಿಷಯಗಳಿಗಾಗಿ ಭಾರತದಾದ್ಯಂತ ಪ್ರಯಾಣಿಸುತ್ತಿದ್ದ. ವಿಶೇಷ ಸಾಫ್ಟ್‌ವೇರ್ ಬಳಸಿ ಪಾಕಿಸ್ತಾನಕ್ಕೆ ಚಿತ್ರಗಳು ಮತ್ತು ವಿಡಿಯೋಗಳನ್ನು ಕಳುಹಿಸುತ್ತಿದ್ದ ಎಂದು ಕೋಲ್ಕತ್ತಾ ಪೊಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದಾರೆ.
ಬಿಹಾರದಲ್ಲಿ ವಾಸಿಸುತ್ತಿದ್ದರೂ, ಝಾ ಕೋಲ್ಕತ್ತಾಗೆ ಹಲವಾರು ಬಾರಿ ಪ್ರಯಾಣಿಸಿದ್ದ. ಕಳೆದ ಮೂರು ತಿಂಗಳಲ್ಲಿ ವಂಶಿ ಕೋಲ್ಕತ್ತಾದ ಹಲವಾರು ಸ್ಥಳಗಳಲ್ಲಿ ತಂಗಿದ್ದಾನೆ. ಕೆಲ ನಿರ್ಬಂಧಿತ ಸ್ಥಳಗಳ ಚಿತ್ರಗಳನ್ನು ತೆಗೆದುಕೊಂಡಿದ್ದಾನೆ. ಇವೆಲ್ಲವುಗಳನ್ನೂ ಪಾಕಿಸ್ತಾನಿ ಮಹಿಳೆಯೊಂದಿಗೆ ಹಂಚಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಸರು ಹೇಳಲು ಇಚ್ಛಿಸದ ಕೋಲ್ಕತ್ತಾ ಪೊಲೀಸ್ ಎಸ್‌ಟಿಎಫ್‌ನ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಇದು ದೇಶದ ಆಂತರಿಕ ಭದ್ರತೆಯ ವಿಷಯವಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಹೀಗಾಗಿ ತನಿಖೆಯ ವೇಳೆ ಆರೋಪಿತ ಮಹಿಳೆಯ ವಿವರ ಮತ್ತು ಗುರುತನ್ನು ಬಹಿರಂಗಪಡಿಸುವುದಿಲ್ಲ. ಆದರೆ ಮಹಿಳೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊಂದಿಗೆ ನೇರವಾಗಿ ಸಂಬಂಧ ಹೊಂದಿದ್ದಾಳೆ ಎಂಬುದು ತಿಳಿದುಬಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ದಾವಣಗೆರೆ ಕುಟುಂಬದ ಮೂವರ ಸಾವು ಪ್ರಕರಣ.. ಅಮೆರಿಕದಲ್ಲೇ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರ ನಿರ್ಧಾರ