ಚೆನ್ನೈ(ತಮಿಳುನಾಡು): ಚೆನ್ನೈನ ಸರ್ಕಾರಿ ಕಿಲ್‌ಪಾಕ್ ವೈದ್ಯಕೀಯ ಕಾಲೇಜು (ಕೆಎಂಸಿ) ಆಸ್ಪತ್ರೆಯ ತಜ್ಞ ವೈದ್ಯರು 42 ವರ್ಷದ ಮಹಿಳೆಗೆ ಹೊಂದಾಣಿಕೆಯಾಗದ ರಕ್ತ ಗುಂಪಿನ (ಎಬಿಒ ಇನ್ಕಂಪ್ಯಾಟಿಬಲ್) ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ. ಕೆಎಂಸಿ ಆಸ್ಪತ್ರೆ ಅಧಿಕಾರಿಗಳು ನೀಡಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ- ಬಿ ಪಾಸಿಟಿವ್ ರಕ್ತದ ಗುಂಪಿನ ಮಹಿಳೆಗೆ ಕಿಡ್ನಿ ಕಸಿ ಮಾಡಲಾಗಿದ್ದು, ಕಿಡ್ನಿ ದಾನಿ ಆಕೆಯ ಪತಿ ಎಬಿ ಪಾಸಿಟಿವ್ ರಕ್ತದ ಗುಂಪನ್ನು ಹೊಂದಿದ್ದರು.
ರೋಗಿಯು ಕೆಎಂಸಿಯಲ್ಲಿ ಜನಿಸಿದ್ದರು ಮತ್ತು ಎಂಟನೇ ವಯಸ್ಸಿನಲ್ಲಿ ಕಿಡ್ನಿಸ್ಟೋನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆಗ ಆಕೆಗೆ ಯಾವುದೇ ಸಮಸ್ಯೆಗಳಾಗಿರಲಿಲ್ಲ. ಇತ್ತೀಚಿನವರೆಗೆ ಆರೋಗ್ಯವಂತಳಾಗಿದ್ದ ಮಹಿಳೆಗೆ 2020 ರ ಸುಮಾರಿಗೆ ಅತಿಯಾದ ಮುಟ್ಟಿನ ರಕ್ತಸ್ರಾವ ಸಮಸ್ಯೆ ಆರಂಭವಾಯಿತು.
ವೈದ್ಯಕೀಯ ಪರೀಕ್ಷೆಯ ನಂತರ ಮಹಿಳೆಗೆ ತೀವ್ರ ಮೂತ್ರಪಿಂಡ ವೈಫಲ್ಯ ಇರುವುದು ಪತ್ತೆಯಾಯಿತು ಮತ್ತು ಅದೇ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗೆ ಒಳಪಡಿಸಲಾಯಿತು. ಹದಗೆಡುತ್ತಿರುವ ಅವರ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ 46 ವರ್ಷದ ಪತಿ ಆಕೆಗೆ ಮೂತ್ರಪಿಂಡ ಕಸಿ ಮಾಡುವಂತೆ ವೈದ್ಯರಿಗೆ ವಿನಂತಿಸಿದ್ದರು.
ಆದರೆ ಆ ಮಹಿಳೆಗೆ ಹೊಂದುವ ಸೂಕ್ತವಾದ ಮೂತ್ರಪಿಂಡ ಪಡೆಯಲು ವೈದ್ಯರಿಗೆ ಸಾಧ್ಯವಾಗಲಿಲ್ಲ. ರೋಗಿಯ ರಕ್ತದ ಗುಂಪಿನ ದಾನಿಯೇ ಕಿಡ್ನಿ ದಾನ ಮಾಡಬೇಕಿತ್ತು. ಆದರೆ ಅದೇ ಗುಂಪಿನ ದಾನಿಗಳು ಸಿಗುವುದು ದುರ್ಲಭವಾಗಿತ್ತು. ಹೀಗಾಗಿ ಎಬಿ ಪಾಸಿಟಿವ್ ರಕ್ತದ ಗುಂಪಿನ ಮಹಿಳೆಯ ಪತಿ ತನ್ನ ಒಂದು ಮೂತ್ರಪಿಂಡವನ್ನು ಪತ್ನಿಗೆ ದಾನ ಮಾಡಲು ಮುಂದೆ ಬಂದರು.
ದಾನಿಯ ಮೂತ್ರಪಿಂಡದ ವಿರುದ್ಧ ಪ್ರತಿಕಾಯಗಳನ್ನು ತೆಗೆದುಹಾಕಲು ವೈದ್ಯರು ವಿಶೇಷ ಡಯಾಲಿಸಿಸ್ ಮತ್ತು ಪ್ಲಾಸ್ಮಾಫೆರೆಸಿಸ್ ಮಾಡಿದರು. ಸಾಕಷ್ಟು ರೋಗನಿರೋಧಕ ಸಿದ್ಧತೆಯ ನಂತರ, ಅವರು ನವೆಂಬರ್ 30 ರಂದು ಎರಡು ವಿಭಿನ್ನ ರಕ್ತದ ಗುಂಪುಗಳ ನಡುವೆ ಮೂತ್ರಪಿಂಡ ಕಸಿ ಮಾಡಿದರು.
ಶಸ್ತ್ರಚಿಕಿತ್ಸೆಯ ನಂತರ ರೋಗಿಯನ್ನು ತೀವ್ರ ನಿಗಾದಲ್ಲಿರಿಸಲಾಗಿತ್ತು. ಸದ್ಯ ಮಹಿಳೆಯ ಮೂತ್ರಪಿಂಡವು ಸಾಮಾನ್ಯವಾಗಿ ಕಾರ್ಯ ನಿರ್ವಹಿಸುತ್ತಿರುವುದು ಮತ್ತು ಒಟ್ಟಾರೆ ಉತ್ತಮ ಆರೋಗ್ಯವನ್ನು ಹೊಂದಿರುವುದು ಕಂಡು ಬಂದಿದೆ.
ಕೆಎಂಸಿ ಆಸ್ಪತ್ರೆ ವೈದ್ಯರು ನಡೆಸಿದ ಇಂಥ 13ನೇ ಮೂತ್ರಪಿಂಡ ಕಸಿ ಇದಾಗಿದೆ. ಆಸ್ಪತ್ರೆಯು 2000 ನೇ ಇಸ್ವಿಯಿಂದ ಒಟ್ಟು 200 ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗಳನ್ನು ಮಾಡಿದೆ.