ಚಂದ್ರಗಿರಿ (ಆಂಧ್ರ ಪ್ರದೇಶ) : ವ್ಯಕ್ತಿಯೊಬ್ಬ ವಿವಾಹಿತ ಮಹಿಳೆಯೊಬ್ಬರನ್ನು ಒಂದು ತಿಂಗಳ ಕಾಲ ಗೃಹ ಬಂಧನದಲ್ಲಿಟ್ಟು, ಎರಡು ಪ್ರದೇಶಗಳಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ದಲಿತ ಸಮುದಾಯಗಳ ಮುಖಂಡರು ಆರೋಪಿಸಿದ್ದಾರೆ. ತಿರುಪತಿ ಜಿಲ್ಲೆಯ ಚಂದ್ರಗಿರಿಯಲ್ಲಿ ಸಂತ್ರಸ್ತ ಮಹಿಳೆಯೊಂದಿಗೆ ಮಂಗಳವಾರ ಮಾಧ್ಯಮಗೋಷ್ಟಿ ನಡೆಸಲಾಯಿತು. ತಿರುಪತಿ ಅಂಬೇಡ್ಕರ್ ಭವನದ ಅಧ್ಯಕ್ಷ ದುಗ್ಗಾಣಿ ಜಯರಾಂ, ದಲಿತ ಸಂಯುಕ್ತ ಒಕ್ಕೂಟದ ಮುಖಂಡರಾದ ಕಾತಿ ಹರಿ ಮತ್ತಿತರರು ಈ ಕುರಿತು ಮಾತನಾಡಿದರು.
ಈ ವೇಳೆ ಅವರು ನೀಡಿದ ವಿವರಗಳ ಪ್ರಕಾರ- ಚಿತ್ತೂರು ಜಿಲ್ಲೆ ವೆದುರುಕುಪ್ಪಂ ಮಂಡಲದ ಗಂಗಾಧರನೆಲ್ಲೂರು ಕ್ಷೇತ್ರದ ಬಲಿಜಪಲ್ಲಿಯ ವಿವಾಹಿತ ಮಹಿಳೆ ತಿರುಪತಿಯ ಖಾಸಗಿ ಶಾಲೆಯೊಂದರಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಲಿಜಪಲ್ಲಿ ಮೂಲದ ವ್ಯಕ್ತಿಯೊಬ್ಬ ಕಳೆದ ವರ್ಷ ನವೆಂಬರ್ 17 ರಂದು ವಿವಾಹಿತ ಮಹಿಳೆ ಕೆಲಸ ಮಾಡುತ್ತಿದ್ದ ಶಾಲೆಗೆ ಹೋಗಿದ್ದ. ನಂತರ ಆತ ತನ್ನೊಂದಿಗೆ ಬಂದು ಬ್ಯಾಂಕ್ ಸಾಲ ತೆಗೆದುಕೊಳ್ಳುವಂತೆ ಮಹಿಳೆಗೆ ಬಲವಂತ ಮಾಡಿದ್ದಾನೆ. ಆಕೆ ನಿರಾಕರಿಸಿ ಪ್ರತಿರೋಧ ವ್ಯಕ್ತಪಡಿಸಿದಾಗ ಶಾಲೆಯ ಆವರಣದಲ್ಲಿಯೇ ಬೆದರಿಸಿ ಥಳಿಸಿ ಬಲವಂತವಾಗಿ ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾನೆ. ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಕೊಠಡಿಯೊಂದರಲ್ಲಿ ಕೂಡಿ ಹಾಕಿ 5 ದಿನಗಳ ಕಾಲ ಅತ್ಯಾಚಾರವೆಸಗಿದ್ದಾನೆ.
ಪಾಕಳ ಮಂಡಲದ ದಾಮಲಚೆರುವು ಎಂಬಲ್ಲಿ ಆಕೆಯನ್ನು ಕೆಲವು ದಿನಗಳ ಕಾಲ ಬಂಧಿಸಿ ಅತ್ಯಾಚಾರ ಎಸಗಲಾಗಿದೆ. ಬಳಿಕ ದುಷ್ಕರ್ಮಿಯು ಆಕೆಯನ್ನು ಆಕೆಯ ತವರು ಮನೆಗೆ ಬಿಟ್ಟು ಪರಾರಿಯಾಗಿದ್ದಾನೆ. ಘಟನೆಯಿಂದ ಆಘಾತಕ್ಕೊಳಗಾದ ಸಂತ್ರಸ್ತ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಆಕೆಯ ಕುಟುಂಬಸ್ಥರು ಅವಳ ಜೀವ ಕಾಪಾಡಿದ್ದಾರೆ. ಗ್ರಾಮದ ಹಿರಿಯರು ಮತ್ತು ಕುಟುಂಬದ ಸದಸ್ಯರು ಸಹಕಾರ ನೀಡದಿದ್ದರೂ ತಾವು ಈ ವರ್ಷ ಜನವರಿ 6 ರಂದು ತಿರುಪತಿ ಜಿಲ್ಲಾ ಎಸ್ಪಿ ಮತ್ತು ದಿಶಾ ಪೊಲೀಸ್ ಠಾಣೆ ಡಿಎಸ್ಪಿ ರಾಮರಾಜು ಅವರಿಗೆ ದೂರು ಸಲ್ಲಿಸಿದ್ದೇವೆ ಎಂದು ದಲಿತ ಸಮುದಾಯಗಳ ಮುಖಂಡರು ಹೇಳಿದ್ದಾರೆ.
ಜೈಪುರದಲ್ಲೊಂದು ಹೇಯ ಕೃತ್ಯ, ಐದು ವರ್ಷದ ಬಾಲೆ ಮೇಲೆ ಅತ್ಯಾಚಾರ: ಮತ್ತೊಂದೆಡೆ ಜೈಪುರದಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪದ ಮೇಲೆ 24 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸಂತ್ರಸ್ತೆ ಸೋಮವಾರ ತನ್ನ ನಿವಾಸದ ಹೊರಗೆ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆ. ಆರೋಪಿಯನ್ನು ಹರೀಶ್ ಕುಮಾವತ್ ಎಂದು ಗುರುತಿಸಲಾಗಿದ್ದು, ಮಿಠಾಯಿ ನೀಡುವ ಆಸೆ ತೋರಿಸಿ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ನೆರೆಹೊರೆಯವನಾಗಿದ್ದು, ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾಲೋನಿಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದನು. ಆತನನ್ನು ಬಂಧಿಸಲಾಗಿದೆ ಮತ್ತು ಸಂತ್ರಸ್ತೆಯ ತಂದೆಯ ದೂರಿನ ಆಧಾರದ ಮೇಲೆ ಪೋಕ್ಸೋ ಕಾಯ್ದೆಯಡಿ ಅಪಹರಣ ಮತ್ತು ಅತ್ಯಾಚಾರ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಜವಾಹರ್ ನಗರ ಪೊಲೀಸ್ ಠಾಣೆ ಎಸ್‌ಎಚ್‌ಒ ಪನ್ನಾ ಲಾಲ್ ಮೀನಾ ಅವರು ಮಾಹಿತಿ ನೀಡಿದ್ದಾರೆ. ಸಂತ್ರಸ್ತೆ ಕಿರುಚಲು ಪ್ರಾರಂಭಿಸಿದಾಗ ಆರೋಪಿಯು ಗಾಬರಿಯಾಗಿ ಆಕೆಯನ್ನು ಹೋಗಲು ಬಿಟ್ಟಿದ್ದಾನೆ. ನಂತರ ಬಾಲಕಿ ತನ್ನ ಮೇಲಾದ ದೌರ್ಜನ್ಯವನ್ನು ತಾಯಿ ಬಳಿ ಹೇಳಿಕೊಂಡಿದ್ದಾಳೆ. ನಂತರ ದೂರು ದಾಖಲಿಸಲಾಗಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಮತ್ತು ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ ಪನ್ನಾ ಲಾಲ್ ಮೀನಾ ಹೇಳಿದರು.
ಇದನ್ನೂ ಓದಿ: ಕೇರಳ ಮೂಲದ ಯುವತಿ ಮೇಲೆ ಬೆಂಗಳೂರಲ್ಲಿ ಗ್ಯಾಂಗ್ ರೇಪ್: ಕೃತ್ಯಕ್ಕೆ ಆರೋಪಿಗಳ ಗೆಳತಿಯಿಂದಲೂ ಸಾಥ್