ಶಿಮ್ಲಾ( ಹಿಮಾಚಲ ಪ್ರದೇಶ): ರಾಜಧಾನಿ ಧರ್ಮಶಾಲಾದಲ್ಲಿರುವ ವಿಧಾನಸಭೆ ಕಟ್ಟಡದ ಮುಖ್ಯ ದ್ವಾರ ಮತ್ತು ಕಾಂಪೌಂಡ್ ತಡೆಗೋಡೆಗೆ ಖಲಿಸ್ತಾನಿ ಧ್ವಜ ಕಟ್ಟಿರುವುದನ್ನು ಸಿಖ್ಸ್ ಫಾರ್ ಜಸ್ಟೀಸ್ ಒಪ್ಪಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.
ಧರ್ಮಶಾಲಾದ ಹಿಮಾಚಲ ಪ್ರದೇಶ ವಿಧಾನಸೌಧದಲ್ಲಿ ಹಾರಿಸಲಾದ ಖಲಿಸ್ತಾನ್ ಧ್ವಜಗಳನ್ನು ಭಗವಂತ್ ಮಾನ್ ಅವರೊಂದಿಗೆ ಮಂಡಿಯಲ್ಲಿ ಅರವಿಂದ್ ಕೇಜ್ರಿವಾಲ್ ಜನಸಭಾದಲ್ಲಿ ಭಾಗವಹಿಸಲು ತೆರಳಿದ್ದ ಸಿಖ್ ಕಾರ್ಯಕರ್ತರ ಮೂಲಕ ಕಳುಹಿಸಿಕೊಡಲಾಗಿದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ.
ಭಾನುವಾರ ಬೆಳಗ್ಗೆ ಧರ್ಮಶಾಲಾದಲ್ಲಿ ಹಿಮಾಚಲ ಪ್ರದೇಶ ವಿಧಾನಸಭೆಯ ಮುಖ್ಯ ಗೇಟ್ ಮತ್ತು ಗಡಿ ಗೋಡೆಯ ಮೇಲೆ ಖಲಿಸ್ತಾನ್ ಧ್ವಜಗಳನ್ನು ಕಟ್ಟಿದ್ದು ಕಂಡು ಬಂದಿತ್ತು.
ಏನಿದೆ ವಿಡಿಯೋದಲ್ಲಿ: ಪಂಜಾಬ್ ಚುನಾವಣೆ ಸಂದರ್ಭದಲ್ಲಿ ಎಎಪಿಗೆ 6 ಮಿಲಿಯನ್ ಡಾಲರ್ ದೇಣಿಗೆ ನೀಡುವಂತೆ ನಿಷೇಧಿತ ಸಿಖ್ಸ್ ಫಾರ್ ಜಸ್ಟೀಸ್ ಆಮಿಷವೊಡ್ಡಿತ್ತು. ಹೀಗಾಗಿ SFJ ಜನಾಭಿಪ್ರಾಯವನ್ನು ಉತ್ತೇಜಿಸಲು ಸಿಎಂ ಭಗವಂತ್ ಮಾನ್ ಅವರಿಗೆ ಹತ್ತಿರವಿರುವ ಕಾರ್ಯಕರ್ತರನ್ನು ಬಳಸಿಕೊಳ್ಳುತ್ತಿದೆ ಎಂದು ಸಂಘಟನೆಯ ಸಲಹೆಗಾರ ಗುರುಪತ್ವಂತ್ ಸಿಂಗ್ ಪನ್ನುನ್ ವಿಡಿಯೊದಲ್ಲಿ ತಿಳಿಸಿದ್ದಾರೆ.
ಧರ್ಮಶಾಲಾದಲ್ಲಿ ಖಲಿಸ್ತಾನ್ ಧ್ವಜಗಳು ಸಿಎಂ ಜೈ ರಾಮ್ ಠಾಕೂರ್ ಅವರಿಗೆ ಸ್ಪಷ್ಟ ಸಂದೇಶವಾಗಿದ್ದು, ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹಣೆಯ ಮೂಲಕ ಹಿಮಾಚಲ ಪ್ರದೇಶವನ್ನು ಮರು ಪಡೆಯಲಾಗುವುದು ಮತ್ತು ಮತ್ತೊಮ್ಮೆ ಪಂಜಾಬ್‌ನ ಭಾಗ ಮಾಡಲಾಗುವುದು ಎಂದು ಪನ್ನುನ್ ವಿಡಿಯೋದಲ್ಲಿ ಘೋಷಿಸಿದ್ದಾರೆ.
ಜೂನ್ 2022 ರಂದು ಆಪರೇಷನ್ ಬ್ಲೂಸ್ಟಾರ್‌ನ 38 ನೇ ವರ್ಷಾಚರಣೆ ಭಾಗವಾಗಿ, ಖಲಿಸ್ತಾನ್ ಪರ ಗುಂಪು ಹಿಮಾಚಲ ಪ್ರದೇಶದಲ್ಲಿ ಖಾಲಿಸ್ತಾನ್ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ಈ ಸಂಬಂಧ ಮತದಾನದ ದಿನಾಂಕವನ್ನು ಘೋಷಿಸುತ್ತದೆ ಎಂದು ಇದೇ ವೇಳೆ ಪನ್ನುನ್ ಹೇಳಿದ್ದಾರೆ.
ಈ ಹಿಂದೆ ಏಪ್ರಿಲ್ 29 ರಂದು ಶಿಮ್ಲಾದಲ್ಲಿ ಖಲಿಸ್ತಾನಿ ಧ್ವಜ ಹಾರಿಸುವುದಾಗಿ ಬೆದರಿಕೆ ಹಾಕಲಾಗಿತ್ತು. ಎಚ್ಚರಿಕೆ ಪತ್ರದಲ್ಲಿ ನಿರ್ದಿಷ್ಟವಾಗಿ ಹಿಮಾಚಲ ಸಿಎಂ ಹೆಸರನ್ನು ನಮೂದಿಸಲಾಗಿತ್ತು. ಖಲಿಸ್ತಾನಿ ಧ್ವಜಗಳು ಮತ್ತು ಭಿಂದ್ರನ್‌ವಾಲೆ ಅವರ ಚಿತ್ರಗಳೊಂದಿಗೆ ಹಿಮಾಚಲ ಪೊಲೀಸರು ಕೆಲವು ಯುವಕರಿಗೆ ನೋಟಿಸ್ ನೀಡಿದ ನಂತರ ಈ ಬೆದರಿಕೆ ಪತ್ರ ಬಂದಿದೆ.
ಇದನ್ನು ಓದಿ:ವಿಡಿಯೋ: ಹಿಮಾಚಲ ವಿಧಾನಸಭೆ ಕಟ್ಟಡದ ಗೇಟ್, ತಡೆಗೋಡೆಯಲ್ಲಿ ಖಲಿಸ್ತಾನ್ ಧ್ವಜ