ಹೈದರಾಬಾದ್: ಮುಂದಿನ ಐದು ವರ್ಷಗಳಲ್ಲಿ ಕೇರಳವನ್ನು ಕಡು ಬಡತನ ಮುಕ್ತ ರಾಜ್ಯವನ್ನಾಗಿ ಮಾಡಲಾಗುವುದು ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದರು. ಕೇರಳದಲ್ಲಿ ಗುರುವಾರ ನಡೆದ ಹೊಸ ಸರ್ಕಾರದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಗುರುವಾರ ಮಧ್ಯಾಹ್ನ, ಕೇರಳದಲ್ಲಿ ಎಲ್‌ಡಿಎಫ್ ನೇತೃತ್ವದ 21 ಸದಸ್ಯ ಬಲದ ಸರ್ಕಾರವು ಸತತ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡಿದೆ.
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಮುಖ್ಯಮಂತ್ರಿ ಮತ್ತು ಎಲ್ಲ 20 ಮಂತ್ರಿಗಳಿಗೆ ಪ್ರಮಾಣವಚನ ಮತ್ತು ಗೌಪ್ಯತೆ ಬೋಧಿಸಿದರು. ಪಿಣರಾಯಿ ಕ್ಯಾಬಿನೆಟ್‌ನ ಮೊದಲ ಸಭೆಯಲ್ಲಿ, ರಾಜ್ಯದ ತೀವ್ರ ಬಡತನವನ್ನು ನಿವಾರಿಸುವ ಉದ್ದೇಶದಿಂದ ವ್ಯಾಪಕವಾದ ಸಮೀಕ್ಷೆ ನಡೆಸಲು ನಿರ್ಧರಿಸಲಾಯಿತು.
ತೀವ್ರ ಬಡತನಕ್ಕೆ ಕಾರಣವಾಗುವ ಅಂಶಗಳು ಮತ್ತು ಅದರ ನಿವಾರಣೆಗೆ ಸಂಬಂಧಿಸಿದ ಸಲಹೆಗಳ ಕುರಿತು ಇಲಾಖೆಯ ಕಾರ್ಯದರ್ಶಿಗಳು ಸ್ಥಳೀಯಾಡಳಿತಗಳೊಂದಿಗೆ ಚರ್ಚಿಸಿ ವರದಿ ನೀಡುವಂತೆ ಶಿಫಾರಸು ಸಲ್ಲಿಸಲಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಅವರು ಮೊದಲ ಕ್ಯಾಬಿನೆಟ್ ಸಭೆಯ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಹೇಳಿದರು.
ಸ್ವತ್ತು ಮರುಸ್ವಾಧೀನ ಪ್ರಕ್ರಿಯೆಯಿಂದಾಗಿ ವಾಸದ ಮನೆಗಳನ್ನು ಕಳೆದುಕೊಳ್ಳುವುದನ್ನು ತಡೆಯಲು ಕೂಡ ಸರ್ಕಾರ ಶಾಸನವನ್ನು ಜಾರಿಗೆ ತರಲಿದೆ.
ಈ ವಿಷಯವನ್ನು ಅಧ್ಯಯನ ಮಾಡಲು ಸೂಚಿಸಲಾಗಿದ್ದು, ಜುಲೈ 15 ರೊಳಗೆ ವರದಿ ಸಲ್ಲಿಸುವಂತೆ ಹಣಕಾಸು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಯೋಜನಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಪರಿಣಿತ ವಕೀಲರನ್ನು ಒಳಗೊಂಡ ಸಮಿತಿಯನ್ನು ಕ್ಯಾಬಿನೆಟ್ ಆದೇಶದ ಮೂಲಕ ರಚಿಸಲಾಗಿದೆ ಎಂದು ವಿಜಯನ್ ಹೇಳಿದರು.
ಈ ಸರ್ಕಾರವು ವಾಸದ ಮನೆಯನ್ನು ಎಲ್ಲರಿಗೂ ಮೂಲ ಹಕ್ಕು ಎಂದು ಗುರುತಿಸಿದೆ. ಎಲ್ಲರಿಗೂ ಮನೆ ಖಾತರಿಪಡಿಸುವ ವಿಶಾಲ ಗುರಿಯನ್ನು ಪೂರೈಸಲು ವಿವಿಧ ಯೋಜನೆಗಳನ್ನು ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಹೇಳಿದರು.
ಕೇರಳ ಕ್ಯಾಬಿನೆಟ್‌ನ ಇತರ ಪ್ರಮುಖ ನಿರ್ಧಾರಗಳು
- ಸಂಪೂರ್ಣ ಆಧುನೀಕರಣ, ಸ್ವಾವಲಂಬನೆ, ಉತ್ಪಾದಕತೆ, ಲಾಭದ ಸಾಮರ್ಥ್ಯ ಮತ್ತು ಸುಸ್ಥಿರತೆ ಇವು ಹೊಸ ಸರ್ಕಾರದ ಕೃಷಿ ಧ್ಯೇಯವಾಕ್ಯಗಳಾಗಿರಲಿವೆ. ಪ್ರತಿ ಬೆಳೆಯ ಉತ್ಪಾದಕತೆ ಹೆಚ್ಚಿಸಲು ಗುರಿಗಳನ್ನು ನಿಗದಿಪಡಿಸಲಾಗುತ್ತದೆ.
- ರಾಜ್ಯದಲ್ಲಿ ಹಾಲು ಉತ್ಪಾದನೆಯು 2025 ರ ವೇಳೆಗೆ ಸ್ವಾವಲಂಬನೆ ಪಡೆಯುತ್ತದೆ. ಮುಂದಿನ ಐದು ವರ್ಷಗಳಲ್ಲಿ ಮಾಂಸ ಮತ್ತು ಮೊಟ್ಟೆಗಳ ಉತ್ಪಾದಕತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
- ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರಾಟದತ್ತ ಗಮನ ಹರಿಸಲಾಗುವುದು. ವೈಜ್ಞಾನಿಕ ಕೃಷಿ ವಿಧಾನಗಳನ್ನು ಕೈಗೊಳ್ಳಲು ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಿ ಕಾರ್ಯಗತಗೊಳಿಸಲಾಗುವುದು. ತೆಂಗಿನಕಾಯಿ ಮತ್ತು ಮಸಾಲೆಗಳನ್ನು ಸಂಸ್ಕರಿಸಲು ಕೈಗಾರಿಕೆಗಳಿಗೆ ಉತ್ತೇಜನ ನೀಡಲಾಗುವುದು.
- ರಬ್ಬರ್ ಮೌಲ್ಯವರ್ಧನೆಗಾಗಿ ಪಾಲಿಮರ್ ಸೈನ್ಸ್ ಟೆಕ್ನಾಲಜಿಯನ್ನು ಆಧರಿಸಿ ಉತ್ಕೃಷ್ಟತೆಯ ಕೇಂದ್ರವನ್ನು ಸ್ಥಾಪಿಸಲಾಗುವುದು. ಸ್ಥಳೀಯ ಗದ್ದೆ ಪ್ರದೇಶಗಳನ್ನು ಸುಧಾರಿಸಲಾಗುವುದು.
- ಮನೆಕೆಲಸಗಳ ಮೇಲಿನ ಹೊರೆ ಕಡಿಮೆ ಮಾಡಲು ರಾಜ್ಯ ಸರ್ಕಾರವು ವಿಶೇಷ ಕಾರ್ಯಕ್ರಮದ ಮೂಲಕ ಗೃಹಿಣಿಯರನ್ನು ತಲುಪಲಿದೆ.
- ಗೃಹಿಣಿಯರ ಮನೆಕೆಲಸದ ಹೊರೆಯನ್ನು ನಿವಾರಿಸಲು ಮತ್ತು ಮನೆ ಸಹಾಯಕರು, ಕೆಲಸದವರ ಹಿತರಕ್ಷಿಸಲು ಕಾರ್ಯಕ್ರಮ ತಯಾರಿಸುವಂತೆ ಮುಖ್ಯ ಆಡಳಿತಾಧಿಕಾರಿ, ಸ್ಥಳೀಯ ಆಡಳಿತ ಕಾರ್ಯದರ್ಶಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಿಗೆ ಜವಾಬ್ದಾರಿ ವಹಿಸಲಾಗಿದೆ.
- ಎಲ್ಲ ಸರ್ಕಾರಿ ಸೇವೆಗಳನ್ನು ಆನ್‌ಲೈನ್ ಮೂಲಕ ಬಾಗಿಲಿಗೆ ತಲುಪಿಸಲು ಯೋಜನೆ ರೂಪಿಸಲು ನಿರ್ಧರಿಸಲಾಗಿದೆ. ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಈ ಯೋಜನೆಯನ್ನು ಜಾರಿಗೊಳಿಸಲಾಗುವುದು. ಐಟಿ ಕಾರ್ಯದರ್ಶಿ ಮತ್ತು ಐಟಿ ತಜ್ಞರನ್ನು ಒಳಗೊಂಡ ಸಮಿತಿಯು ಯೋಜನೆಗೆ ಅಂತಿಮ ವಿನ್ಯಾಸ ನೀಡಲಿದೆ.
- ಪಿಣರಾಯಿ ಸರ್ಕಾರವು ರಾಜ್ಯದಲ್ಲಿ 20 ಲಕ್ಷ ವಿದ್ಯಾವಂತರಿಗೆ ಉದ್ಯೋಗ ನೀಡುವ ಗುರಿಯನ್ನು ಹೊಂದಿದೆ. ಕೇರಳ ಅಭಿವೃದ್ಧಿ ಮತ್ತು ನವೀನ ಕಾರ್ಯತಂತ್ರದ ಮಂಡಳಿಗೆ (ಕೆ ಡಿಸ್ಕ್) ಜುಲೈ 15 ರೊಳಗೆ ಈ ಕುರಿತು ವರದಿಯನ್ನು ಸಲ್ಲಿಸಲು ನಿರ್ದೇಶಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.