ನವದೆಹಲಿ: ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ವೈದ್ಯಕೀಯ ಸ್ಥಿತಿಗತಿ, ಆರೋಗ್ಯ ಕಾರ್ಯಕ್ಷಮತೆಯ ಆಧಾರದ ಮೇಲೆ ನೀತಿ ಆಯೋಗವು 2019-20ನೇ ಸಾಲಿನ ಆರೋಗ್ಯ ಸೂಚ್ಯಂಕ ಬಿಡುಗಡೆ ಮಾಡಿದ್ದು, ಕೇರಳ ಪ್ರಥಮ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿದೆ. ಇನ್ನು ಕರ್ನಾಟಕಕ್ಕೆ 9ನೇ ಸ್ಥಾನ ಲಭಿಸಿದೆ.
ಹೆಚ್ಚುತ್ತಿರುವ ಕಾರ್ಯಕ್ಷಮತೆ ಮತ್ತು ಒಟ್ಟಾರೆ ಕಾರ್ಯಕ್ಷಮತೆಯಲ್ಲಿ ತಮಿಳುನಾಡು ಎರಡನೇ ಹಾಗೂ ತೆಲಂಗಾಣ ಮೂರನೇ ಸ್ಥಾನದಲ್ಲಿದೆ. ಕಳಪೆ ಆರೋಗ್ಯ ಸ್ಥಿತಿಯುಳ್ಳ ರಾಜ್ಯಗಳ ಪೈಕಿ ಉತ್ತರ ಪ್ರದೇಶದ ಬಳಿಕ ಬಿಹಾರ ಹಾಗೂ ಮಧ್ಯಪ್ರದೇಶ ರಾಜ್ಯಗಳಿವೆ.
ಭಾರತದಲ್ಲಿನ ಇತರ ನಾಲ್ಕು ದೊಡ್ಡ ರಾಜ್ಯಗಳಾದ ರಾಜಸ್ಥಾನ, ಬಿಹಾರ, ಒಡಿಶಾ, ಉತ್ತರಾಖಂಡ - ತಮ್ಮ ಆರೋಗ್ಯ ಕ್ಷೇತ್ರದ ಕಾರ್ಯಕ್ಷಮತೆಯ ವಿಷಯದಲ್ಲಿ ಯಾವುದೇ ಸುಧಾರಣೆ ದಾಖಲಿಸಿಲ್ಲ ಎಂದು ನೀತಿ ಆಯೋಗ ತಿಳಿಸಿದೆ.
ಇದನ್ನೂ ಓದಿ: ಚೆನ್ನೈ 'ಬಿರಿಯಾನಿ'... ಸತತ 6ನೇ ವರ್ಷವು ಭಾರತದ ನೆಚ್ಚಿನ ಖಾದ್ಯಗಳಲ್ಲಿ ಮೊದಲ ಸ್ಥಾನ!
ಸಣ್ಣ ರಾಜ್ಯಗಳ ಪೈಕಿ ಮಿಜೋರಾಂ ಮತ್ತು ಮೇಘಾಲಯವು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದೆ. ದೊಡ್ಡ ರಾಜ್ಯಗಳ ಪೈಕಿ ಆಂಧ್ರ ಪ್ರದೇಶ ಮತ್ತು ತಮಿಳುನಾಡು ಅಗ್ರಸ್ಥಾನದಲ್ಲಿವೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ದೆಹಲಿ, ಜಮ್ಮು-ಕಾಶ್ಮೀರ ಮತ್ತು ಲಕ್ಷದ್ವೀಪ ಮುಂಚೂಣಿಯಲ್ಲಿವೆ.
ಕರ್ನಾಟಕದ ಸ್ಥಾನವೆಷ್ಟು?
ದಕ್ಷಿಣ ಭಾರತದ ಇತರ ರಾಜ್ಯಗಳು ಆರೋಗ್ಯ ಕ್ಷೇತ್ರದ ವಿವಿಧ ಮಾನದಂಡಗಳಡಿ ಅಗ್ರಸ್ಥಾನದಲ್ಲಿದ್ದರೆ, ಕರ್ನಾಟಕ ಈ ಬಾರಿ ಒಂದು ಶ್ರೇಯಾಂಕ ಕುಸಿದು, 8ರಿಂದ 9ನೇ ಸ್ಥಾನಕ್ಕೆ ಇಳಿಕೆಯಾಗಿದೆ. ಅಷ್ಟೆ ಅಲ್ಲ, ದೊಡ್ಡ ರಾಜ್ಯಗಳ ಪೈಕಿ ಒಟ್ಟಾರೆ ಆರೋಗ್ಯ ಕಾರ್ಯಕ್ಷಮತೆ ವಿಚಾರದಲ್ಲಿ ನಮ್ಮ ರಾಜ್ಯ 19ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆರೋಗ್ಯ ಕ್ಷೇತ್ರದಲ್ಲಿ ರಾಜ್ಯದ ಪ್ರಗತಿ ಪ್ರಮಾಣವು -1.37 % ರಷ್ಟು ಕುಸಿದಿದೆ.
'ಆರೋಗ್ಯಕರ ರಾಜ್ಯಗಳು, ಪ್ರಗತಿಶೀಲ ಭಾರತ' ಎಂಬ ಶೀರ್ಷಿಕೆ ಮೇಲೆ ನೀತಿ ಆಯೋಗ ಬಿಡುಗಡೆ ಮಾಡುತ್ತಿರುವ ನಾಲ್ಕನೇ ಆರೋಗ್ಯ ಸೂಚ್ಯಂಕ ಇದಾಗಿದ್ದು, ನಾಲ್ಕು ಬಾರಿಯೂ ಕೇರಳ ಅತ್ಯುತ್ತಮ ರಾಜ್ಯವಾಗಿ ಹೊರಹೊಮ್ಮಿದೆ.