ತಿರುವನಂತಪುರಂ (ಕೇರಳ): ಕೇರಳ ವಿಧಾನಸಭೆ ಚುನಾವಣೆಗೆ ಸರಿ ಸುಮಾರು ಇನ್ನೂ ನಾಲ್ಕು ವರ್ಷಗಳು ಬಾಕಿ ಇದೆ. ಆದರೆ, ಈಗಲೇ ಕೇರಳ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಶುರುವಾಗಿದೆಯೇ ಎಂಬ ಚರ್ಚೆ ಮುನ್ನಲೆಗೆ ಬಂದಿದೆ. ಇದಕ್ಕೆ ಕಾರಣ ಹಿರಿಯ ನಾಯಕ, ಹಾಲಿ ಸಂಸದ ಶಶಿ ತರೂರ್ ಅವರ 'ನನ್ನ ಗಮನ ಕೇರಳದ ಕಡೆಯಿದೆ' ಎಂಬ ಒಂದೇ ಒಂದು ಹೇಳಿಕೆ. ಹೌದು, ಕಾಂಗ್ರೆಸ್ ಪಕ್ಷದಲ್ಲಿ ತರೂರ್ ಅವರಿಗೆ ಯುವಕರ ಬೆಂಬಲ ಕಂಡು ಬರುತ್ತಿದೆ. ಇದರಿಂದ ಕೇರಳದಲ್ಲಿ ತಮ್ಮ ಸತ್ವವನ್ನು ಪರೀಕ್ಷಿಸಲು ಅವರು ಸಜ್ಜಾಗಿದ್ದಾರೆ.
ದೇಶದ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಸ್ಥಿತಿ ಬೇರೆಯದ್ದೇ ಆಗಿದ್ದರೆ, ಕೇರಳ ಕಾಂಗ್ರೆಸ್ ರಾಜಕೀಯವು ಅತ್ಯಂತ ಪ್ರಕ್ಷುಬ್ಧವಾಗಿರುತ್ತದೆ. 2009ರಿಂದ ರಾಜಧಾನಿ ತಿರುವನಂತಪುರಂ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಶಿ ತರೂರ್, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷಕ್ಕೆ ಸ್ಪರ್ಧಿಸಿ ಗಮನವನ್ನು ಸೆಳೆದಿದ್ದರು. ಅಲ್ಲಿಂದ ಕೇರಳ ಕಾಂಗ್ರೆಸ್ ನಾಯಕತ್ವದ ಕುರಿತೂ ತರೂರ್ ಚರ್ಚೆಯನ್ನು ಹುಟ್ಟು ಹಾಕುತ್ತಲೇ ಇದ್ದಾರೆ.
ತರೂರ್ ಹೇಳಿಕೆಯಿಂದ ಮುಸುಕಿನ ಗುದ್ದಾಟ: ಇದರ ನಡುವೆ ಶಶಿ ತರೂರ್ ಮಹತ್ವದ ಹೇಳಿಕೆಯೊಂದು ನೀಡಿದ್ದಾರೆ. ನನ್ನ ಗಮನ ಕೇರಳದ ಕಡೆಯಿದೆ. ನನ್ನ ಚಟುವಟಿಕೆಯ ಕ್ಷೇತ್ರ ಕೇರಳ ಮಾತ್ರವಾಗಿದೆ. ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತರೂರ್ ಮಾಧ್ಯಮವನ್ನುದ್ದೇಶಿಸಿ ಮಾತನಾಡುತ್ತಾ ತಿಳಿಸಿದ್ದಾರೆ. ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಹೇಳಿಕೆಯು ಕೇರಳ ಕಾಂಗ್ರೆಸ್‌ನ ಹಲವು ನಾಯಕರಿಗೆ ಅಚ್ಚರಿ ಮೂಡಿಸಿರುವುದಲ್ಲದೇ, ಅಸಮಾಧಾನಕ್ಕೂ ಕಾರಣವಾಗಿದೆ. ಇದರಿಂದ ಹಿರಿಯ ನಾಯಕರು ತರೂರ್ ಜೊತೆ ಮುಸುಕಿನ ಗುದ್ದಾಟ ಆರಂಭವಾಗಿದೆ ಎನ್ನಲಾಗುತ್ತಿದೆ.
ಇದೇ ವಿಷಯವಾಗಿ ಸಮಾರಂಭವೊಂದರಲ್ಲಿ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ, ಕೇರಳ ಕಾಂಗ್ರೆಸ್ ನಾಯಕತ್ವದ ಬಗ್ಗೆ ಈಗ ಯಾರೂ ಚರ್ಚೆ ಮಾಡಬಾರದು. ನಾಲ್ಕು ವರ್ಷಗಳ ನಂತರ ಯಾರು ಏನಾಗುತ್ತಾರೆ?. ಈಗಲೇ ಯಾರಾದರೂ ಆ ಸ್ಥಾನಕ್ಕಾಗಿ ಕೋಟ್ ಹೊಲಿಸಿಕೊಳ್ಳುತ್ತಿದ್ದರೆ, ಅದನ್ನು ತೆಗೆದುಹಾಕಬಹುದು ಎಂದು ಪರೋಕ್ಷವಾಗಿ ತರೂರ್ ವಿರುದ್ಧ ಕುಟುಕಿದ್ದಾರೆ.
ಇದನ್ನೂ ಓದಿ: ಸುದ್ದಿ ವಾಹಿನಿಗಳಿಗೆ ಸುಪ್ರೀಂ ಚಾಟಿ: ಸಂಯಮದಿಂದ ವರ್ತಿಸುವುದನ್ನು ಕಲಿಯಲು ಸೂಚನೆ
ಅಲ್ಲದೇ, ಮುಂಬರುವ ಸಾರ್ವತ್ರಿಕ ಚುನಾವಣೆಗೆ ಒಟ್ಟಾಗಿ ತಯಾರಿ ನಡೆಸುವುದು, ಒಂದೇ ತಂಡವಾಗಿ ಚುನಾವಣೆಯನ್ನು ಎದುರಿಸುವುದು ನಮ್ಮ ತಕ್ಷಣದ ಕಾರ್ಯಸೂಚಿಯಾಗಿದೆ ಎಂದು ರಮೇಶ್ ಚೆನ್ನಿತ್ತಲ ತಿಳಿಸಿದ್ದಾರೆ. ಮತ್ತೋರ್ವ ಹಿರಿಯ ನಾಯಕ ಕೆ.ಮುರಳೀಧರನ್, ಪಕ್ಷದೊಂದಿಗೆ ಚರ್ಚಿಸಬೇಕಾದುದನ್ನು ಪಕ್ಷದೊಳಗೆ ಚರ್ಚಿಸಬೇಕೇ ವಿನಾಃ ಬಹಿರಂಗವಾಗಿ ಅಲ್ಲ. ಸದ್ಯದ ನಮ್ಮ ಗುರಿ ಲೋಕಸಭೆ ಚುನಾವಣೆಯಾಗಿದೆ. ನಾವು ಇಲ್ಲಿ ಗೆಲ್ಲದಿದ್ದರೆ, ಇನ್ನೊಂದು ಚುನಾವಣೆಯ ಬಗ್ಗೆ ಆಲೋಚಿಸುವ ಸ್ಥಿತಿಯಲ್ಲಿ ಇರುವುದಿಲ್ಲ. ಅಭ್ಯರ್ಥಿಗಳನ್ನು ನಿರ್ಧರಿಸುವುದು ಪಕ್ಷದ ಹೈಕಮಾಂಡ್ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಕೂಡ ಶಶಿ ತರೂರ್ ಬಹಿರಂಗ ಹೇಳಿಕೆಗೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಯಕರು ಏನಾದರೂ ಚರ್ಚಿಸಲು ಇಚ್ಛಿಸಿದರೆ ಪಕ್ಷದೊಳಗೆ ಚರ್ಚಿಸಬೇಕು. ಯಾರೂ ಹೊಸ ಚರ್ಚೆಗೆ ಅವಕಾಶ ನೀಡಬಾರದು ಎಂದು ವೇಣುಗೋಪಾಲ್ ಹೇಳಿದ್ದಾರೆ. ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸಂಚಾಲಕ ಎಂಎಂ ಹಾಸನ್ ಸಹ ತರೂರ್ ಹೇಳಿಕೆ ಬಗ್ಗೆ ಲೇವಡಿ ಮಾಡಿದ್ದಾರೆ. ನಾಯಕರನ್ನು ಜನರು ನಿರ್ಧರಿಸುತ್ತಾರೆ, ಮಾಧ್ಯಮಗಳಲ್ಲ. ಯಾರಿಗೆ ಆಗಲಿ ಪ್ರಧಾನಿ, ಮುಖ್ಯಮಂತ್ರಿ ಆಗುವ ಆಸೆ ಇರಬಹುದು. ಆದರೆ, ಅದನ್ನು ಹೇಳಿಕೊಂಡು ತಿರುಗಾಡಬಾರದು ಎಂದಿದ್ದಾರೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಸಾಮಾಜಿಕ ಆಂದೋಲನ.. ಹಾಥ್ ಸೇ ಹಾಥ್ ಜೋಡೋ ರಾಜಕೀಯ ಅಭಿಯಾನ: ಕಾಂಗ್ರೆಸ್