ತಿರುವನಂತಪುರಂ: ಕೇರಳದಲ್ಲಿ ಕೋವಿಡ್ ತಲ್ಲಣ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 25,010 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಒಂದೇ ದಿನ 177 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದೇ ಅವಧಿಯಲ್ಲಿ 1,51,317 ಕೊರೊನಾ ಟೆಸ್ಟ್ ಮಾಡಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ.
ಸೆಪ್ಟೆಂಬರ್ ಅಂತ್ಯದ ವೇಳೆಗೆ ಕೇರಳದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಒಂದು ಡೋಸ್ ಲಸಿಕೆ ಪಡೆಯಲಿದ್ದಾರೆ. ಶೇ.78 ರಷ್ಟು ಜನರಿಗೆ ಮೊದಲ ಡೋಸ್ ನೀಡಲಾಗಿದ್ದು, ಶೇ.30 ರಷ್ಟು ಜನರಿಗೆ ಎರಡೂ ಡೋಸ್ ನೀಡಲಾಗಿದೆ.
ಸಿಎಂ ಪಿಣರಾಯಿ ಹೇಳಿದ್ದೇನು?
'ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಅಧಿಕವಾಗಿದ್ದರೂ, ಯಾವುದೇ ಆತಂಕಪಡುವ ಅಗತ್ಯವಿಲ್ಲ. ಪ್ರತಿಯೊಬ್ಬರೂ ಲಸಿಕೆಯನ್ನು ಪಡೆಯಬೇಕು. ಕೋವಿಡ್ ವಿರುದ್ಧ ಹೋರಾಡುವ ಏಕೈಕ ಮಾರ್ಗವೆಂದರೆ ಲಸಿಕೆ ತೆಗೆದುಕೊಳ್ಳುವುದು' ಎಂದು ಸಿಎಂ ಹೇಳಿದ್ದಾರೆ.
'ಶಾಲಾ-ಕಾಲೇಜುಗಳನ್ನು ಆರಂಭಿಸುವ ಸಮಯ ಬಂದಿದೆ'
ಕೋವಿಡ್ ನಿಯಂತ್ರಿಸುವ ಬಗ್ಗೆ ತಜ್ಞರ ಸಂಪರ್ಕದಲ್ಲಿದ್ದೇವೆ. ಈಗ ಶಾಲಾ-ಕಾಲೇಜುಗಳನ್ನು ಆರಂಭಿಸುವ ಸಮಯ ಬಂದಿದೆ. ಮಾತುಕತೆಯ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಕಾಲೇಜುಗಳಲ್ಲಿ ಲಸಿಕೆ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಕೇರಳದಲ್ಲಿ 2,37,643 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಕೇವಲ ಶೇ 12.9 ರಷ್ಟು ಜನರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈವರೆಗೆ ಕೋವಿಡ್‌ಗೆ ಬಲಿಯಾದವ ಸಂಖ್ಯೆ 22,303 ತಲುಪಿದೆ.