ಕೊಚ್ಚಿ (ಕೇರಳ): ಸಹೋದರದಿಂದಲೇ ಅತ್ಯಾಚಾರಕ್ಕೊಳಗಾದ ಬಾಲಕಿ ಈಗ 30 ವಾರಗಳ ಗರ್ಭಿಣಿ ಆಗಿರುವ ಪ್ರಕರಣ ಕೇರಳದಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ಬಾಲಕಿಗೆ ಗರ್ಭಪಾತ ಮಾಡಿಸಲು ಅನುಮತಿ ನೀಡಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಅಪ್ರಾಪ್ತೆಗೆ ಗರ್ಭಪಾತ ಮಾಡಿಸಲು ಸೂಚಿಸಿದೆ.
ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಸಂತ್ರಸ್ತೆ ಕುಟುಂಬ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಸಂತ್ರಸ್ತೆ ಇನ್ನೂ ಅಪ್ರಾಪ್ತೆಯಾಗಿದ್ದಾಳೆ. ಅವಿವಾಹಿತೆಯೂ ಹೌದು. ಕ್ರೂರ ಸತ್ಯವೆಂದರೆ, ಅಪ್ರಾಪ್ತೆ ತನ್ನ ಸಹೋದರರಿಂದಲೇ ಅತ್ಯಾಚಾರಕ್ಕೀಡಾಗಿ ಗರ್ಭಿಣಿಯಾಗಿದ್ದಾಳೆ. ಇದರಿಂದ ಕುಟುಂಬ ತಲೆತಗ್ಗಿಸುವಂತಾಗಿದೆ ಎಂದಿದೆ.
ಕುಟುಂಬದ ಗೌರವ ಮತ್ತು ಅಪ್ರಾಪ್ತೆಯ ಆರೋಗ್ಯದ ದೃಷ್ಟಿಯಿಂದ 30 ವಾರಗಳ ಗರ್ಭವತಿಯಾಗಿದ್ದರೂ ಅಬಾರ್ಷನ್ಗೆ ಕೋರ್ಟ್ ಅನುಮತಿಸಿದೆ. ಅಲ್ಲದೇ, ಸಮಾಜದಲ್ಲಿ ಹೆಚ್ಚುತ್ತಿರುವ ಅಪ್ರಾಪ್ತರ ಗರ್ಭಪಾತದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದೆ.
ಲೈಂಗಿಕ ಶಿಕ್ಷಣ ಮರುಪರಿಶೀಲಿಸುವ ಸಮಯ: ಇದೇ ವೇಳೆ ಶಾಲೆಗಳಲ್ಲಿ ನೀಡಲಾಗುತ್ತಿರುವ ಲೈಂಗಿಕ ಶಿಕ್ಷಣದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ವಿ.ಜಿ. ಅರುಣ್ ಅವರಿದ್ದ ಪೀಠ, ಶಾಲೆಗಳಲ್ಲಿ ನೀಡಲಾಗುತ್ತಿರುವ ಲೈಂಗಿಕ ಶಿಕ್ಷಣವನ್ನು ಮರುಪರಿಶೀಲಿಸಬೇಕಾದ ಸಮಯ ಬಂದಿದೆ. ಈ ಬಗ್ಗೆ ಮಕ್ಕಳಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದು ಸಲಹೆ ನೀಡಿದೆ.
ಇಂಟರ್‌ನೆಟ್‌ನಲ್ಲಿ ಅಶ್ಲೀಲ ಚಿತ್ರಗಳು ಸುಲಭವಾಗಿ ಲಭ್ಯವಾಗುವ ಕಾರಣ ಬಾಲಾಪರಾಧಿಗಳು ಹೆಚ್ಚುವಂತಾಗಿದೆ. ಮಕ್ಕಳಿಗೆ ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳ ಸುರಕ್ಷಿತ ಬಳಕೆಯ ಬಗ್ಗೆ ಶಿಕ್ಷಣ, ಜಾಗೃತಿ ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ಈ ಕುರಿತು ಸರ್ಕಾರ ಗಂಭೀರವಾಗಿ ಯೋಚಿಸಿ ಅವಶ್ಯಕ ಕ್ರಮಕ್ಕೆ ಮುಂದಾಗಬೇಕು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಓದಿ: ಹೆಣ್ಣು ಮಗು ಹುಟ್ಟಿದರೆ ಸಂಭ್ರಮಿಸುವ ಗ್ರಾಮಗಳಿವು: 'ಆರ್ಥಿಕ ಭದ್ರತೆ' ಒದಗಿಸುವ ಆದರ್ಶ ಹಳ್ಳಿಗಳ ಕಥೆ ಇದು