ತಿರುವನಂತಪುರ(ಕೇರಳ):ವರದಕ್ಷಿಣೆ ಪಿಡುಗಿನ ವಿರುದ್ಧ ರಾಜ್ಯವೊಂದರ ರಾಜ್ಯಪಾಲರೇ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಇಂತಹದ್ದೊಂದು ಅಪರೂಪದ ಘಟನೆಗೆ ಕೇರಳ ರಾಜಭವನ ಸಾಕ್ಷಿಯಾಗಿದೆ.
ಬುಧವಾರ ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ರಾಜಭವನದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಕೇರಳ ರಾಜಭವನದಲ್ಲಿ ಈ ಉಪವಾಸ ಸತ್ಯಾಗ್ರಹ ಆರಂಭಿಸುವ ಮೂಲಕ ವರದಕ್ಷಿಣೆ ಎಂಬ ಮಹಾಮಾರಿ ವಿರುದ್ಧ ಜಾಗೃತಿ ಮೂಡಿಸಲು ರಾಜ್ಯಪಾಲರು ಮುಂದಾಗಿದ್ದಾರೆ.
ಮಹಿಳೆಯ ವಿರುದ್ಧದ ಕಿರುಕುಳಕ್ಕೆ ಅಂತ್ಯ ಹಾಡುವುದು ಮತ್ತು ಹಿಂಸೆ ವಿರುದ್ಧ ಜಾಗೃತಿ ಮೂಡಿಸುವುದು ರಾಜ್ಯಪಾಲರ ಉಪವಾಸದ ಪ್ರಮುಖ ಉದ್ದೇಶ ಎಂದು ರಾಜಭವನದ ಮೂಲಗಳು ತಿಳಿಸಿವೆ.
ರಾಜ್ಯಪಾಲರು ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜಭವನದಲ್ಲಿ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ವಿನೂತನ ಪ್ರತಿಭಟನೆ ಜತೆ ಜಾಗೃತಿ ಮೂಡಿಸುತ್ತಿರುವುದು ವಿಶೇಷವಾಗಿದೆ. ಇಂದು ಬೆಳಗ್ಗೆ 8 ಗಂಟೆಗೆ ಉಪವಾಸ ಸತ್ಯಾಗ್ರಹ ಆರಂಭಿಸಿರುವ ರಾಜ್ಯಪಾಲರು ಸಂಜೆ 6 ಗಂಟೆವರೆಗೆ ಉಪವಾಸ ಕೈಗೊಳ್ಳಲಿದ್ದಾರೆ.
ಇದೇ ವೇಳೆ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಉಪವಾಸ ಸತ್ಯಾಗ್ರಹದ ನಿಮಿತ್ತ ಪ್ರಾರ್ಥನಾ ಸಭೆಯನ್ನೂ ಆಯೋಜಿಸಿದ್ದಾರೆ. ಉಪವಾಸ ಅಂತ್ಯಗೊಳ್ಳುವ ಮುನ್ನ ಈ ಪ್ರಾರ್ಥನಾ ಸಭೆ ನಡೆಯಲಿದೆ. ನಿನ್ನೆ ಸಂಜೆ ಈ ಸಂಬಂಧ ವಿಡಿಯೋ ಸಂದೇಶವನ್ನೂ ರಾಜ್ಯಪಾಲರು ಬಿಡುಗಡೆ ಮಾಡಿದ್ದರು. ಇತ್ತೀಚೆಗೆ ಕೇರಳದಲ್ಲಿ ವರದಕ್ಷಿಣೆ ಪಿಡುಗಿಗೆ ಹಲವು ಮಹಿಳೆಯರು ನೇಣಿಗೆ ಶರಣಾಗಿದ್ದರು. ಈ ವಿಚಾರ ದೇಶಾದ್ಯಂತ ಭಾರಿ ಸದ್ದು ಮಾಡಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಐತಿಹಾಸಿಕ ನಿರ್ಣಯ ಕೈಗೊಂಡು ಇಂದು ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.