ಕಣ್ಣೂರು(ಕೇರಳ): ಕಣ್ಣೂರಿನ ಪಯ್ಯನ್ನೂರಿನಲ್ಲಿ ತನ್ನ 8 ವರ್ಷದ ಮಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ತಂದೆಗೆ ತಳಿಪರಂಬದ ತ್ವರಿತ ನ್ಯಾಯಾಲಯ 90 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 1.25 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ. 2018ರಲ್ಲಿ ಪಯ್ಯನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೌರ್ಜನ್ಯ ನಡೆದಿತ್ತು.
ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ ರಾಜೇಶ್ ಅವರು ಐಪಿಸಿಯ ಒಂದು ಸೆಕ್ಷನ್ ಮತ್ತು ಲೈಂಗಿಕ ಅಪರಾಧಗಳ ವಿರುದ್ಧ ಮಕ್ಕಳ ರಕ್ಷಣೆಯ (ಪೋಕ್ಸೊ) ನಾಲ್ಕು ಸೆಕ್ಷನ್‌ಗಳ ಅಡಿ ತನ್ನ ಅಪ್ರಾಪ್ತ ಮಗನಿಗೆ (12 ವರ್ಷದೊಳಗಿನ) ಲೈಂಗಿಕ ಕಿರುಕುಳ ನೀಡಿದ 44 ವರ್ಷದ ವ್ಯಕ್ತಿಯನ್ನು ತಪ್ಪಿತಸ್ಥರು ಎಂದು ಪರಿಗಣಿಸಿ ಗುರುವಾರ(ನಿನ್ನೆ) ಶಿಕ್ಷೆಯನ್ನು ಪ್ರಕಟಿಸಿದರು.
ತಂದೆಗೆ ಐಪಿಸಿಯ ಸೆಕ್ಷನ್ 377 (ಅಸ್ವಾಭಾವಿಕ ಅಪರಾಧಗಳು) ಅಡಿ 10 ವರ್ಷ ಜೈಲು ಶಿಕ್ಷೆ, ಮತ್ತು ಪೋಕ್ಸೋ ಕಾಯ್ದೆಯ ಸೆಕ್ಷನ್ 3 (ಎ), 5 (ಎಲ್), (ಎಂ), ಮತ್ತು (ಎನ್) ಅಡಿ ತಲಾ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಮಕ್ಕಳ ವಿರುದ್ಧದ ಲೈಂಗಿಕ ಅಪರಾಧಗಳ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶೆರಿಮೋಲ್ ಜೋಸ್ ಹೇಳಿದ್ದಾರೆ. ಶಿಕ್ಷೆಯು ಏಕಕಾಲದಲ್ಲಿ ನಡೆಯುವುದರಿಂದ ಅವರು ಕೇವಲ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.
ಕ್ರೈಮ್ ಫೈಲ್ ಪ್ರಕಾರ "ಜುಲೈ 26, 2018ರಂದು ಘಟನೆ ನಡೆದಿತ್ತು. ಎಂಟು ವರ್ಷದ ಮಗನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಅಂದಿನ ಪಯ್ಯನೂರು ಎಸ್‌ಐ ಕೆ.ಪಿ.ಶೈನ್ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು. ನಂತರ ಪಯ್ಯನ್ನೂರು ಪೊಲೀಸ್ ಇನ್ಸ್ ಪೆಕ್ಟರ್ ಕೆ.ವಿನೋದ್ ಕುಮಾರ್ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ಈ ಸಂಬಂಧ ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೊ ನ್ಯಾಯಾಲಯವು ಐದು ಸೆಕ್ಷನ್‌ಗಳಲ್ಲಿ 90 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 1.25 ಲಕ್ಷ ರೂಪಾಯಿ ದಂಡ ವಿಧಿಸಿದೆ. ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಶೆರಿಮೋಲ್ ಜೋಸ್ ವಾದ ಮಂಡಿಸಿದ್ದರು.
64 ವರ್ಷದ ವ್ಯಕ್ತಿಗೆ 95 ವರ್ಷ ಕಠಿಣ ಶಿಕ್ಷೆ: ಈ ಮಧ್ಯೆ, ತ್ರಿಶೂರ್‌ನಲ್ಲಿ 10 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 64 ವರ್ಷದ ವ್ಯಕ್ತಿಗೆ ಚಾಲಕ್ಕುಡಿ ಪೋಕ್ಸೋ ನ್ಯಾಯಾಲಯ 95 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ನಾಲ್ಕೂವರೆ ಲಕ್ಷ ರೂಪಾಯಿ ದಂಡ ವಿಧಿಸಿದೆ. ದಂಡದ ಮೊತ್ತವನ್ನು ಸಂತ್ರಸ್ತರಿಗೆ ಪಾವತಿಸಲು ಆದೇಶಿಸಲಾಗಿದೆ.
ಪ್ರಕರಣದ ವಿವರ: 2018ರಲ್ಲಿ ಘಟನೆ ನಡೆದಿತ್ತು. ಆರೋಪಿ ಪಕ್ಷಿಗಳನ್ನು ಹಿಡಿದು ಅಂಗಡಿಯ ಮೂಲಕ ಮಾರಾಟ ಮಾಡುತ್ತಿದ್ದ ವ್ಯಕ್ತಿ. ಚಿತ್ರಹಿಂಸೆಗೊಳಗಾದ 10 ವರ್ಷದ ವಿದ್ಯಾರ್ಥಿ ಆರೋಪಿಯಿಂದ ಗಿಳಿ ಖರೀದಿಸಲು ಬರುತ್ತಿದ್ದ. ಈ ನಡುವೆ ಆರೋಪಿ ಬಾಲಕಿಗೆ ಬೆದರಿಕೆ ಹಾಕಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಅಪರಾಧದ ಸಮಯದಲ್ಲಿ ವ್ಯಕ್ತಿಗೆ 60 ವರ್ಷ ಮತ್ತು ಬಾಲಕನಿಗೆ 10 ವರ್ಷ ವಯಸ್ಸಾಗಿತ್ತು.
ಬಳಿಕ ಆ ಬಾಲಕ ತನ್ನ ಸ್ನೇಹಿತರಿಗೆ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾನೆ. ಈ ವಿಚಾರ ತಿಳಿದ ಸ್ನೇಹಿತರು ಬಂದು ವಿಚಾರಿಸಿದಾಗ ಆರೋಪಿ ಬೆದರಿಸಿ ವಾಪಸ್ ಕಳುಹಿಸಿದ್ದ. ಬಳಿಕ ಸ್ನೇಹಿತರು ಬಾಲಕನ ಮನೆಯವರಿಗೆ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ನಂತರ ಮನೆಯವರು ಆತನ ವಿರುದ್ಧ ಮಾಲಾ ಪೊಲೀಸರಿಗೆ ದೂರು ನೀಡಿದ್ದರು. ಸಿಐ ಸಜಿನ್ ಶಶಿ ಅವರು ಪ್ರಕರಣದ ಚಾರ್ಜ್ ಶೀಟ್ ಸಲ್ಲಿಸಿದ್ದರು. ಸಿಐ ಕೆ.ಕೆ.ಭೂಪೇಶ್ ಮತ್ತು ಸಜಿನ್ ಶಶಿ ತನಿಖೆ ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಅಡ್. ಬಾಬುರಾಜ್ ಪ್ರಾಸಿಕ್ಯೂಷನ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಇದನ್ನೂ ಓದಿ: Rape on minor girl: ಸ್ಕೂಟಿ ಕಲಿಸುವುದಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ : ಕಾಮುಕನ ಬಂಧನ