ತಿರುವನಂತಪುರಂ (ಕೇರಳ): ಕೋವಿಡ್ ಪ್ರಕರಣಗಳ ಹೆಚ್ಚಳ ಹಿನ್ನೆಲೆ ರಾಜ್ಯದ ಜನರ ಮೇಲೆ ಪ್ರಯಾಣ ನಿರ್ಬಂಧಗಳನ್ನು ನೆರೆಯ ಕರ್ನಾಟಕ ಹೇರಿರುವುದು ಕೇಂದ್ರ ಸರ್ಕಾರದ ನಿರ್ದೇಶನಕ್ಕೆ ವಿರುದ್ಧವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ರಾಜ್ಯಗಳು ತಮ್ಮ ಗಡಿಗಳನ್ನು ಮುಚ್ಚುವ ಪ್ರಯಾಣ ನಿರ್ಬಂಧಗಳನ್ನು ಹೇರಬಾರದು ಎಂದು ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿತ್ತು. ಆದರೆ ಇದರ ವಿರುದ್ಧವಾಗಿ ಕರ್ನಾಟಕ ಸರ್ಕಾರ ಹೊಸ ನಿರ್ಬಂಧಗಳನ್ನು ವಿಧಿಸಿದೆ ಎಂದು ಸಿಎಂ ಪಿಣರಾಯಿ ಅವರು ರಾಜ್ಯ ವಿಧಾನಸಭೆಗೆ ತಿಳಿಸಿದರು.
ಇದನ್ನೂ ಓದಿ: ತಲಪಾಡಿ ಗಡಿಯಲ್ಲಿ ಪೊಲೀಸ್ ಸರ್ಪಗಾವಲು: ADGP ಭೇಟಿ ವೇಳೆ ಕೇರಳಿಗರಿಂದ ಹೆದ್ದಾರಿ ತಡೆ
ಹಿಂದಿನ 72 ಗಂಟೆಗಳಲ್ಲಿ ಪಡೆದ ಆರ್‌ಟಿ-ಪಿಸಿಆರ್ ಕೋವಿಡ್ ನೆಗೆಟಿವ್ ರಿಪೋರ್ಟ್ ಅನ್ನು ಕರ್ನಾಟಕ ಸರ್ಕಾರ ಕಡ್ಡಾಯ ಮಾಡಿದೆ. ತಲಪಾಡಿ ಗಡಿಯ ಚೆಕ್ ಪೋಸ್ಟ್‌ನಲ್ಲಿ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ. ಕೇರಳ ಡಿಜಿಪಿ ಅನಿಲ್ ಕಾಂತ್ ಅವರು ಈಗಾಗಲೇ ಕರ್ನಾಟಕದ ಪೊಲೀಸ್ ಮಹಾ ನಿರ್ದೇಶಕರನ್ನು ಸಂಪರ್ಕಿಸಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ವಿವಿಧ ಉದ್ದೇಶಗಳಿಗಾಗಿ ಕರ್ನಾಟಕಕ್ಕೆ ಪ್ರಯಾಣಿಸುತ್ತಿರುವ ರಾಜ್ಯದ ಜನರಿಗೆ ಯಾವುದೇ ತೊಂದರೆ ಉಂಟುಮಾಡದಂತೆ ನಮ್ಮ ಪೊಲೀಸರು ನೋಡಿಕೊಳ್ಳುತ್ತಿದ್ದಾರೆ. ಕೊರೊನಾ ಲಸಿಕೆಯ ಎರಡೂ ಡೋಸ್ ಪಡೆದವರು, ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಹೋಗುವವರಿಗೆ ಗಡಿ ಪ್ರವೇಶಿಸಲು ಅನುಮತಿ ನೀಡಲಾಗುತ್ತಿದೆ ಎಂದು ಪಿಣರಾಯಿ ವಿಜಯನ್ ವಿಧಾನಸಭೆಯಲ್ಲಿ ಹೇಳಿದರು.