ಕೊಚ್ಚಿ (ಕೇರಳ): ಡಾಲರ್ ಕಳ್ಳಸಾಗಣೆ ಪ್ರಕರಣದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇರವಾಗಿ ಭಾಗಿಯಾಗಿದ್ದಾರೆಂದು ಪ್ರಕರಣದ ಪ್ರಮುಖ ಆರೋಪಿ ಸ್ವಪ್ನ ತಮ್ಮ ರಹಸ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಕಸ್ಟಮ್ಸ್ ಇಲಾಖೆ ತಿಳಿಸಿದೆ. ಕಸ್ಟಮ್ಸ್ ಅಧಿಕಾರಿಗಳು ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಮುಖ್ಯಮಂತ್ರಿ ಪಾತ್ರದ ಬಗ್ಗೆ ಸ್ವಪ್ನಾ ನೀಡಿದ ಹೇಳಿಕೆಯ ಬಗ್ಗೆ ಉಲ್ಲೇಖಿಸಲಾಗಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಕಸ್ಟಮ್ಸ್ ಅಧಿಕಾರಿಗಳ ಎದುರು ನೀಡಿದ ರಹಸ್ಯ ಹೇಳಿಕೆಯಲ್ಲಿ, ಯುಎಇಯ ಹಿಂದಿನ ಕಾನ್ಸುಲ್ ಜನರಲ್ ಅವರೊಂದಿಗೆ ವಿಜಯನ್ ಅವರ ನಿಕಟ ಸಂಪರ್ಕದ ಬಗ್ಗೆ ಮತ್ತು ಅಕ್ರಮ ವಿತ್ತೀಯ ವ್ಯವಹಾರಗಳ ಬಗ್ಗೆ ಉಲ್ಲೇಖವಿದೆ. ಡಾಲರ್ ಕಳ್ಳಸಾಗಣೆ ಪ್ರಕರಣದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪಾತ್ರದ ಕುರಿತು ಸ್ವಪ್ನಾ ಸುರೇಶ್ ಹೇಳಿದ್ದಾರೆ. ಕಾನ್ಸುಲ್ ಜನರಲ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಮುಖ್ಯಮಂತ್ರಿ, ಸ್ಪೀಕರ್ ಮತ್ತು 3 ಕ್ಯಾಬಿನೆಟ್ ಮಂತ್ರಿಗಳು ಡಾಲರ್ ಕಳ್ಳಸಾಗಣೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಸ್ವಪ್ನಾ ಸುರೇಶ್ ಅಧಿಕಾರಿಗಳಿಗೆ ವಿಚಾರಣೆ ವೇಳೆ ತಿಳಿಸಿದ್ದಾರೆ.
ಮುಖ್ಯಮಂತ್ರಿ, ಸ್ಪೀಕರ್ ಮತ್ತು ಮಂತ್ರಿಗಳಿಗೆ ಅರೇಬಿಕ್ ಭಾಷೆ ಬಾರದ ಕಾರಣ ತಾನು ಕಾನ್ಸುಲ್ ಜನರಲ್ ಜತೆಗಿನ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಿರುವುದಾಗಿ ಸ್ವಪ್ನಾ ಸುರೇಶ್ ಹೇಳಿದ್ದಾರೆ.
ಕಸ್ಟಮ್ಸ್ ಅಧಿಕಾರಿಗಳು ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸ್ವಪ್ನಾ ಅವರ ಹೇಳಿಕೆಯ ಅಂಶಗಳನ್ನು ದಾಖಲಿಸಲಾಗಿದೆ. ಅಫಿಡವಿಟ್‌ನಲ್ಲಿನ ವಿಚಾರಗಳು ನಿಜಕ್ಕೂ ಆಘಾತಕಾರಿಯಾಗಿದೆ ಎಂದು ಕಸ್ಟಮ್ಸ್ ಇಲಾಖೆ ಹೇಳಿದೆ.
ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿಥಾಲಾ, ಸಿಎಂ ವಿಜಯನ್ ವಿರುದ್ಧ ವಾಗ್ದಾಳಿ ನಡೆಸಿದರು. ಅವರಿಗೆ ಒಂದು ನಿಮಿಷ ಸಹ ಸಿಎಂ ಹುದ್ದೆಯಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ. ಬಿಜೆಪಿ ಮತ್ತು ಸಿಪಿಐ-ಎಂ ನಡುವಿನ ರಹಸ್ಯ ಸಂಬಂಧದಿಂದಾಗಿ ತನಿಖೆ ಸ್ಥಗಿತಗೊಂಡಿದೆ ಎಂದು ಆಕ್ರೋಶ ಹೊರಹಾಕಿದರು.