ಕಣ್ಣೂರು : ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇದರ ಜೊತೆ ಆಕ್ಸಿಜನ್ ಕೊರತೆ ಹೆಚ್ಚಾಗಿದೆ. ಸೋಂಕಿತರ ಸಾವಿನ ಸಂಖ್ಯೆಯೂ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಿಭಾಯಿಸಲು ಸರ್ಕಾರಕ್ಕೆ ಜನರು ಕೂಡ ಸಹಾಯ ಹಸ್ತ ಚಾಚುತ್ತಿದ್ದಾರೆ.
ಕೇರಳದ ಕಣ್ಣೂರು ಜಿಲ್ಲೆಯ ಬೀಡಿ ಕಾರ್ಮಿಕನೊಬ್ಬ ಮುಖ್ಯಮಂತ್ರಿಯ ವಿಪತ್ತು ಪರಿಹಾರ ನಿಧಿಗೆ (ಸಿಎಂಡಿಆರ್ಎಫ್) 2 ಲಕ್ಷ ರೂ. ದೇಣಿಗೆ ನೀಡಿ ಗಮನ ಸೆಳೆದಿದ್ದಾರೆ.
ಜನಾರ್ಧನನ್ ಮೂಲತಃ ಬೀಡಿ ಕಟ್ಟುವ ಕೇಲಸ ಮಾಡುತ್ತಿದ್ದು, ಇವರ ಅಕೌಂಟ್ನಲ್ಲಿದ್ದ 2,00,850 ರೂ.ಗಳಲ್ಲಿ 2 ಲಕ್ಷ ರೂಪಾಯಿಯನ್ನ ಪರಿಹಾರ ನಿಧಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಇವರ ಅಕೌಂಟ್ನಲ್ಲಿ ಇನ್ನೂ ಕೇವಲ 850 ರೂ. ಉಳಿದುಕೊಂಡಿದೆ.
“ಬ್ಯಾಂಕ್ಗೆ ತೆರಳಿದ ಜನಾರ್ಧನನ್ ತನ್ನ ಅಕೌಂಟ್ನಲ್ಲಿ ಎಷ್ಟು ಹಣ ಇದೆ ಎಂದು ಬ್ಯಾಂಕ್ನ ಸಿಬ್ಬಂದಿಯನ್ನ ಕೇಳಿದ್ದಾರೆ. 2,00,850 ರೂ.ಇದೆ ಎಂದು ಸಿಬ್ಬಂದಿ ಹೇಳಿದಾಗ, ತನ್ನ ಅಕೌಂಟ್ನಿಂದ 2,00,000 ರೂ. ಮುಖ್ಯಮಂತ್ರಿಯ ವಿಪತ್ತು ಪರಿಹಾರ ನಿಧಿಗೆ ವರ್ಗಾಯಿಸಿ ಎಂದು ಹೇಳಿದ್ದಾರೆ.
ಬ್ಯಾಂಕ್ ಉದ್ಯೋಗಿ ಸೌಂದರ್ ರಾಜನ್ ನಿಮ್ಮ ಖಾತೆಯಿಂದ ಅಷ್ಟು ಹಣ ಹಾಕಿದರೆ, ನಿಮ್ಮ ಖಾತೆಯಲ್ಲಿ ಕೇವಲ 850.ರೂ ಉಳಿಯುತ್ತದೆ. ಇನ್ನೊಮ್ಮೆ ಆಲೋಚನೆ ಮಾಡಿ ಹೇಳಿ ಎಂದಿದ್ದಾರೆ. ಆಗ ಜನಾರ್ಧನ್ ಇಲ್ಲ 2 ಲಕ್ಷ ಹಣವನ್ನ ಪರಿಹಾರ ನಿಧಿಗೆ ವರ್ಗಾಯಿಸಿ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬೀಡಿ ಕಾರ್ಮಿಕ ಜನಾರ್ಧನ್, ನಾನು ವಿಕಲಚೇತನ ಕಲ್ಯಾಣ ಪಿಂಚಣಿ ಪಡೆಯುತ್ತಿದ್ದೇನೆ, ಹಾಗೆಯೇ ನಾನು ನನ್ನ ಬೀಡಿ ಉದ್ಯಮದಿಂದ ವಾರಕ್ಕೆ 1000 ರೂ. ಗಳಿಸುತ್ತಿದ್ದೇನೆ.
ನಾನು ಬದುಕಲು ಇಷ್ಟು ಸಾಕು. ಕೋವಿಡ್ ಲಸಿಕೆ ರಾಜ್ಯದ ಪ್ರತಿಯೊಬ್ಬ ನಾಗರಿಕರಿಗೂ ಉಚಿತವಾಗಿ ನೀಡಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದರು. ಸಿಎಂ ಅವರ ಈ ಹೇಳಿಕೆ ನಾನು ದಾನ ಮಾಡಲು ಪ್ರೇರೇಪಿಸಿತು ಎಂದು ಜನಾರ್ಧನ್ ಹೇಳಿದರು.
ಈ ಬಿಕ್ಕಟ್ಟಿನ ಸಮಯದಲ್ಲಿ ಜನಾರ್ಧನನ್ ಅವರ ಕೊಡುಗೆ ಮತ್ತು ಜನರ ಬಗ್ಗೆ ಅವರ ಸಹಾನುಭೂತಿಯನ್ನು ಸಿಎಂ ಪಿಣರಾಯಿ ವಿಜಯನ್ ಶ್ಲಾಘಿಸಿದ್ದಾರೆ.
ಇದನ್ನೂ ಓದಿ : ಮಕ್ಕಳಿಗಾಗಿ ಹೊಸ ಕನ್ನಡ ಚಾನಲ್ ಲೋಕಾರ್ಪಣೆ: ನಿಮ್ಮ ಮನೆಯಂಗಳಕ್ಕೆ 'ಈಟಿವಿ ಬಾಲ ಭಾರತ'