ಇದು ಸಾಮಾಜಿಕ ಜಾಲತಾಣಗಳ ಯುಗ. ಕಣ್ಣು ಮುಚ್ಚಿ ತೆರೆಯುವುದರೊಳಗೆ ಶರವೇಗದಲ್ಲಿ ಸುದ್ದಿ ವಿಶ್ವಾದ್ಯಂತ ಬಿತ್ತರಗೊಳ್ಳುತ್ತದೆ. ಇದರ ಸಹಾಯದಿಂದಲೇ ಸಾವಿರಾರು ಜನರು ಹೀರೋಗಳಾಗಿದ್ದಾರೆ, ಝೀರೋಗಳಾದವರೂ ಇದ್ದಾರೆ. ಇದೀಗ ನಾವು ಹೇಳಹೊರಟಿರುವ ಸುದ್ದಿ ಅತ್ಯಂತ ಕುತೂಹಲಕಾರಿಯಾಗಿದೆ.
ಹಬ್ಬ-ಹರಿದಿನ, ಜಾತ್ರೆಗಳಲ್ಲಿ ಬಲೂನ್ಗಳನ್ನು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದ ಇಲ್ಲೊಬ್ಬ ಬಾಲಕಿ ರಾತ್ರೋರಾತ್ರಿ ರೂಪದರ್ಶಿಯಾಗಿ ಬದಲಾಗಿದ್ದಾಳೆ.
ನಮ್ಮ ಪಕ್ಕದ ಕೇರಳದ ವಿವಿಧ ಪ್ರದೇಶಗಳಲ್ಲಿ ಬಲೂನ್ ಮಾರುತ್ತಾ ಕುಟುಂಬಕ್ಕೆ ಆಧಾರವಾಗಿದ್ದ ರಾಜಸ್ಥಾನದ ಈ ಬಾಲಕಿ ಕೇವಲ ಒಂದೇ ಒಂದು ಆಕರ್ಷಕ ಫೋಟೋದಿಂದ ತಾರೆಯಾಗಿ ಬದಲಾಗಿದ್ದಾಳೆ. ಈಕೆಯ ಫೋಟೋಗಳಿಗೆ ಇನ್ನಿಲ್ಲದ ಬೇಡಿಕೆಯೂ ಬಂದಿದೆ.
ಕೇರಳದ ಕಣ್ಣೂರಿನಲ್ಲಿ ನಡೆಯುತ್ತಿದ್ದ ಜಾತ್ರೆಯೊಂದರಲ್ಲಿ ಬಲೂನ್ ಮಾರಾಟ ಮಾಡ್ತಿದ್ದ ಈ ಬಾಲಕಿಯ ಹೆಸರು ಕಿಸ್ಬು. ಇದೇ ಜಾತ್ರೆಯಲ್ಲಿ ಈ ಹುಡುಗಿ ಫೋಟೋಗ್ರಾಫರ್ ಓರ್ವನ ಗಮನ ಸೆಳೆದಿದ್ದಾಳೆ. ಆತನಿಗೆ ಅದೇನನ್ನಿಸಿತೋ ಏನೋ.. ಬಾಲಕಿಯ ಸಹಜ ಭಂಗಿಯಲ್ಲೇ ಫೋಟೋ ಸೆರೆ ಹಿಡಿದುಬಿಟ್ಟ. ಹೀಗೆ ಸೆರೆ ಹಿಡಿದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ. ಆಗಿದ್ದು ಇಷ್ಟೇ!. ಈ ಫೋಟೋಗೆ ಇನ್ನಿಲ್ಲದ ಪ್ರತಿಕ್ರಿಯೆ ಬರೋಕೆ ಶುರುವಾಗಿದೆ. ಆ ಬಳಿಕ ಬಾಲಕಿಯ ಮೇಕ್ ಓವರ್ ಫೋಟೋಶೂಟ್ ನಡೆಸಲಾಗಿದೆ.
ಕೇರಳದ ಸಾಂಪ್ರದಾಯಿಕ ಸೆಟ್ ಹಾಗೂ ಆಭರಣಗಳನ್ನು ಬಾಲಕಿಗೆ ತೊಡಿಸಿ ಆಕರ್ಷಕ ರೀತಿಯಲ್ಲಿ ಫೋಟೋಶೂಟ್ ನಡೆಸಲಾಗಿದೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ವಾಹ್! ಎಂಬ ಉದ್ಘಾರದಿಂದ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲಕಿ ಮಾಡೆಲ್ ಆಗಿಯೂ ಬದಲಾಗಿದ್ದಾಳೆ.!