ಖಮ್ಮಂ (ತೆಲಂಗಾಣ): ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೆಸಿಆರ್ ರಿಮೋಟ್ ಕಂಟ್ರೋಲ್ ಪ್ರಧಾನಿ ನರೇಂದ್ರ ಮೋದಿ ಬಳಿ ಇದೆ ಎಂದು ಭಾನುವಾರ ಆರೋಪಿಸಿದ್ದಾರೆ ಮತ್ತು ರಾಜ್ಯದ ಆಡಳಿತ ಪಕ್ಷವನ್ನು "ಬಿಜೆಪಿಯ ಬಿ-ಟೀಮ್" ಎಂದು ಕರೆದಿದ್ದಾರೆ. ಅಲ್ಲದೇ, ಬಿಆರ್ಎಸ್ಗೆ ಹೊಸ ನಾಮಕರಣವನ್ನು ಮಾಡಿರುವ ಅವರು, 'ಬಿಜೆಪಿ ರಿಷ್ಟೇದಾರ್ ಸಮಿತಿ' ಎಂದು ಹೆಸರಿಸಿದ್ದಾರೆ.
ಚಂದ್ರಶೇಖರ್ ರಾವ್ ಮತ್ತು ಅವರ ಪಕ್ಷದ ನಾಯಕರ ವಿರುದ್ಧದ ಭ್ರಷ್ಟಾಚಾರ ಆರೋಪಗಳು ಅವರನ್ನು ಬಿಜೆಪಿಗೆ ಅಧೀನರನ್ನಾಗಿ ಮಾಡಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ಬಿಆರ್‌ಎಸ್ ಭಾಗಿಯಾಗಿರುವ ಯಾವುದೇ ಬಣಕ್ಕೆ ಕಾಂಗ್ರೆಸ್ ಸೇರುವುದಿಲ್ಲ ಎಂದು ಇತರ ಎಲ್ಲ ಪ್ರತಿಪಕ್ಷ ನಾಯಕರಿಗೆ ಹೇಳಿದ್ದೇನೆ ಎಂದು ಪ್ರತಿಪಾದಿಸಿದ್ದಾರೆ.
ರಾವ್ ಅವರ ಪಕ್ಷವು "ಬಿಜೆಪಿಯ ಬಿ-ಟೀಮ್": ಇಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಬಿಆರ್‌ಎಸ್ ಬಿಜೆಪಿ ರಿಷ್ಟೇದಾರ್ ಸಮಿತಿಯಂತೆ, ಕೆಸಿಆರ್ ಅವರು ರಾಜ ಮತ್ತು ತೆಲಂಗಾಣ ಅವರ ಸಾಮ್ರಾಜ್ಯ ಎಂದು ಭಾವಿಸುತ್ತಾರೆ" ಎಂದು ಹೇಳಿದರು. ಕಾಂಗ್ರೆಸ್ ಯಾವಾಗಲೂ ಸಂಸತ್ತಿನಲ್ಲಿ ಬಿಜೆಪಿ ವಿರುದ್ಧ ನಿಂತಿದೆ. ಆದರೆ ರಾವ್ ಅವರ ಪಕ್ಷವು "ಬಿಜೆಪಿಯ ಬಿ-ಟೀಮ್" ಎಂದು ಅವರು ಆರೋಪಿಸಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ರಿಮೋಟ್ ಕಂಟ್ರೋಲ್ ಅನ್ನು ಹೊಂದಿದ್ದಾರೆ" ಎಂದು ಮಾಜಿ ಕಾಂಗ್ರೆಸ್ ಮುಖ್ಯಸ್ಥರು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷವು ಇತ್ತೀಚೆಗೆ ಕರ್ನಾಟಕದಲ್ಲಿ "ಭ್ರಷ್ಟ ಮತ್ತು ಬಡವರ ವಿರೋಧಿ ಸರ್ಕಾರದ ವಿರುದ್ಧ ಚುನಾವಣೆಯಲ್ಲಿ ಹೋರಾಡಿದೆ ಮತ್ತು ನಾವು ರಾಜ್ಯದಲ್ಲಿ ಬಡವರು, ಒಬಿಸಿಗಳು, ಅಲ್ಪಸಂಖ್ಯಾತರು ಮತ್ತು ತುಳಿತಕ್ಕೊಳಗಾದವರ ಬೆಂಬಲದೊಂದಿಗೆ ಅವರನ್ನು ಸೋಲಿಸಿದ್ದೇವೆ" ಎಂದು ಇದೇ ವೇಳೆ ರಾಹುಲ್ ಗಾಂಧಿ ಹೇಳಿದ್ದಾರೆ.
ತೆಲಂಗಾಣದಲ್ಲಿ ಪುನರಾವರ್ತನೆಯಾಗಲಿದೆ: "ತೆಲಂಗಾಣದಲ್ಲಿ ಅಂತಹದ್ದೇನಾದರೂ ಸಂಭವಿಸಲಿದೆ. ಒಂದು ಕಡೆ ರಾಜ್ಯದ ಶ್ರೀಮಂತರು ಮತ್ತು ಶಕ್ತಿಯುತರು ಇರುತ್ತಾರೆ ಮತ್ತು ಇನ್ನೊಂದು ಕಡೆ ನಮ್ಮೊಂದಿಗೆ ಬಡವರು, ಆದಿವಾಸಿಗಳು, ಅಲ್ಪಸಂಖ್ಯಾತರು, ರೈತರು ಮತ್ತು ಸಣ್ಣ ಅಂಗಡಿಯವರು ಇರುತ್ತಾರೆ. ಕರ್ನಾಟಕದಲ್ಲಿ ಆಗಿರುವಂತದ್ದು, ತೆಲಂಗಾಣದಲ್ಲಿ ಪುನರಾವರ್ತನೆಯಾಗಲಿದೆ'' ಎಂದು ಅವರು ಹೇಳಿದರು.
ಮಹತ್ವದ ಸಭೆ ಕರೆದ ಕಾಂಗ್ರೆಸ್ ಸಂಸದೀಯ ಮಂಡಳಿ: ಇನ್ನೊಂದೆಡೆ ಜುಲೈ 3 ರಂದು ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಕುರಿತು ಸಂಸದೀಯ ಸ್ಥಾಯಿ ಸಮಿತಿಯಲ್ಲಿ ಚರ್ಚಿಸಲಾಗುವುದು ಎಂದು ಭಾರತೀಯ ಜನತಾ ಪಕ್ಷ ಹೇಳಿತ್ತು. ಈ ಹಿನ್ನೆಲೆ ಕಾಂಗ್ರೆಸ್ ಪಕ್ಷ ಜುಲೈ 1ರಂದು ಮಹತ್ವದ ಸಭೆ ನಡೆಸಿತ್ತು. ನವದೆಹಲಿಯ ಜನಪಥ್ ರಸ್ತೆಯಲ್ಲಿರುವ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಈ ಮಹತ್ವದ ಸಭೆ ನಡೆದಿತ್ತು. ಏಕರೂಪ ನಾಗರಿಕ ಸಂಹಿತೆ ಬಗ್ಗೆ ಸಂಸದೀಯ ಸ್ಥಾಯಿ ಸಮಿತಿಯಲ್ಲಿ ಕಾಂಗ್ರೆಸ್ ಪಕ್ಷ ಯಾವ ನಿಲುವು ತೆಗೆದುಕೊಳ್ಳಬೇಕು ಅನ್ನೋದರ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿತ್ತು.
ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಜಾರಿ ಪ್ರಸ್ತಾಪ: ಕಾನೂನು ಸಮಿತಿ ಚರ್ಚೆಗೂ ಮುನ್ನ ಮಹತ್ವದ ಸಭೆ ಕರೆದ ಕಾಂಗ್ರೆಸ್ ಸಂಸದೀಯ ಮಂಡಳಿ