ನಿಜಾಮಾಬಾದ್(ತೆಲಂಗಾಣ): ದೇಶದ ಜನತೆಗೆ 'ಉಚಿತ'ಗಳ ಸರಮಾಲೆಯನ್ನು ರಾಜಕೀಯ ಪಕ್ಷಗಳು ಘೋಷಣೆ ಮಾಡುತ್ತಿರುವ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಇಂಥ ಸಂದರ್ಭದಲ್ಲಿ ತೆಲಂಗಾಣ ಸಿಎಂ ಕೆ.ಸಿ.ಚಂದ್ರಶೇಖರ ರಾವ್ ನಿನ್ನೆ ನಿಜಾಮಾಬಾದ್‌ನಲ್ಲಿ ಮಹತ್ವದ ಘೋಷಣೆಯೊಂದನ್ನು ಮಾಡಿದರು. 2024ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ಅಸ್ತಿತ್ವಕ್ಕೆ ಬಂದರೆ ದೇಶಾದ್ಯಂತ ರೈತರಿಗೆ ಉಚಿತ ವಿದ್ಯುತ್ ಕಲ್ಪಿಸಲಾಗುವುದು ಎಂದು ಅವರು ಪ್ರಕಟಿಸಿದರು.
ರಾಜಕೀಯ ಪಕ್ಷಗಳು ಜನರಿಗೆ ಉಚಿತ ಯೋಜನೆಗಳನ್ನು ಘೋಷಿಸುವ ಸಂಬಂಧ ಸಲ್ಲಿಸಲಾಗಿರುವ ಸಾಕಷ್ಟು ಅರ್ಜಿಗಳನ್ನು ಹೆಚ್ಚಿನ ಪರಾಮರ್ಶೆಗೆ ಒಳಪಡಿಸುವ ಕಾರಣಕ್ಕೆ ಸುಪ್ರೀಂ ಕೋರ್ಟ್ ಕೆಲವು ದಿನಗಳ ಹಿಂದೆ, ಮೂವರು ಸದಸ್ಯರಿರುವ ನ್ಯಾಯಮೂರ್ತಿಗಳ ಪೀಠಕ್ಕೆ ಅರ್ಜಿಗಳನ್ನು ವರ್ಗಾಯಿಸಿತ್ತು. ಈ ಬೆಳವಣಿಗೆಯ ನಂತರದಲ್ಲಿ ತೆಲಂಗಾಣ ಸಿಎಂ ಅವರಿಂದ ಇಂಥದ್ದೊಂದು ಹೇಳಿಕೆ ಹೊರಬಿದ್ದಿದೆ.
ಮುಂದಿನ ಲೋಕಸಭೆ ಚುನಾವಣೆಗೆ ಈಗಾಗಲೇ ಕಸರತ್ತು ಆರಂಭಿಸಿರುವ ಕೆಸಿಆರ್, ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ದೇಶದಲ್ಲಿ ಬಜೆಪಿಯೇತರ ಧ್ವಜ ಹಾರಾಡುವುದು ನಿಶ್ಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೇಶದ ಎಲ್ಲ ಪ್ರತಿಪಕ್ಷಗಳನ್ನು ಒಂದುಗೂಡಿಸುವ ಪ್ರಯತ್ನ: ನಿತೀಶ್ ಜೊತೆ ವೇದಿಕೆ ಹಂಚಿಕೊಂಡ ಕೆಸಿಆರ್