ಬೆಂಗಳೂರು: ಶಾಲೆಗಳ ಹೊಸ ಪಠ್ಯಕ್ರಮ ಅಭಿವೃದ್ಧಿಪಡಿಸುವ ಸಮಿತಿಯ ಮುಖ್ಯಸ್ಥನಾಗಿರುವುದು ನನಗೆ ಸಿಕ್ಕ ದೊಡ್ಡ ಗೌರವವಾಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಕೆ.ಕಸ್ತೂರಿರಂಗನ್ ಸಂತಸ ವ್ಯಕ್ತಪಡಿಸಿದ್ದಾರೆ.
ಶಾಲೆ, ಬಾಲ್ಯ, ಶಿಕ್ಷಕರು ಮತ್ತು ವಯಸ್ಕರ ಶಿಕ್ಷಣಕ್ಕಾಗಿ ಹೊಸ ಪಠ್ಯಕ್ರಮ ಅಭಿವೃದ್ಧಿಪಡಿಸಲು ಕೇಂದ್ರ ಶಿಕ್ಷಣ ಸಚಿವಾಲಯವು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ.ಕಸ್ತೂರಿರಂಗನ್ ನೇತೃತ್ವದಲ್ಲಿ 12 ಸದಸ್ಯರ ಸಮಿತಿ ರಚಿಸಿದೆ.
ಕೇಂದ್ರ ಸರ್ಕಾರ ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವ ಪ್ರಕ್ರಿಯೆ ಆರಂಭಿಸಿದ್ದು, ಇಸ್ರೋ ಮಾಜಿ ಅಧ್ಯಕ್ಷ ಕೆ.ಕಸ್ತೂರಿರಂಗನ್ ಅವರನ್ನು ಹೊಸ ರಾಷ್ಟ್ರೀಯ ಪಠ್ಯಕ್ರಮ (NCF) ಅಭಿವೃದ್ಧಿಪಡಿಸುವ 12 ಸದಸ್ಯರ ಸ್ಟೀರಿಂಗ್ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಿದೆ.
"ಸಮಿತಿ ಸದಸ್ಯರೆಲ್ಲರೂ ಬಹಳ ಪಾಂಡಿತ್ಯಪೂರ್ಣರು. ಶಿಕ್ಷಣ, ತರಬೇತಿ ಮತ್ತು ಜ್ಞಾನದ ವಿವಿಧ ನೆಲೆಗಳ ಅಂಶಗಳನ್ನು ಚೆನ್ನಾಗಿ ಅರಿತವರು. ಆದ್ದರಿಂದ ಅವರೊಂದಿಗೆ ಕೆಲಸ ಮಾಡುವುದು ಒಂದೊಳ್ಳೆಯ ಅವಕಾಶ. ನಾನು ಅದನ್ನು ಎದುರು ನೋಡುತ್ತಿದ್ದೇನೆ" ಎಂದು ಕಸ್ತೂರಿರಂಗನ್ ಹೇಳಿದ್ದಾರೆ.
ಹೊಸ ರಾಷ್ಟ್ರೀಯ ಪಠ್ಯಕ್ರಮ ರಚನಾ ಸಮಿತಿಯು ಭಾರತದ ಶಾಲೆಗಳ ಪಠ್ಯಕ್ರಮ, ಪಠ್ಯಪುಸ್ತಕ ಮತ್ತು ಬೋಧನಾ ಅಭ್ಯಾಸಗಳಿಗೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತವೆ.
ಇದನ್ನೂ ಓದಿ: ಸೈಕಲ್ ಏರಿ ಸಚಿವಾಲಯಕ್ಕೆ ಹೊರಟ ಸಿಎಂ, ಸಂಪುಟ ಸಹೋದ್ಯೋಗಿಗಳು