ಕಾಗಜನಗರ(ತೆಲಂಗಾಣ): ಜ್ವರ ಹಾಗೂ ವಿಪರೀತ ತಲೆನೋವಿನಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯೋರ್ವಳಿಗೆ ನೋವು ನಿವಾರಕ ಬಾಮ್ ಹಚ್ಚಿಕೊಂಡು ಮಲಗುವಂತೆ ಶಿಕ್ಷಕರು ಸೂಚಿಸಿದ್ದಾರೆ. ಇದಾದ ಮರುದಿನ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಇಲ್ಲಿನ ಕಾಗಜನಗರದ ಕಸ್ತೂರಬಾ ಬಾಲಕಿಯರ ವಿದ್ಯಾಲಯದಲ್ಲಿ ನಡೆದಿದೆ.
ಘಟನೆಯ ಸಂಪೂರ್ಣ ವಿವರ: ತೆಲಂಗಾಣದ ಕಾಗಜನಗರದ ಕಸ್ತೂರಬಾ ಗಾಂಧಿ ಬಾಲಕಿಯರ ವಿದ್ಯಾಲಯದ ವಿದ್ಯಾರ್ಥಿನಿ ಐಶ್ವರ್ಯ(14) ತೀವ್ರ ಜ್ವರ ಹಾಗೂ ತಲೆನೋವಿನಿಂದ ಬಳಲುತ್ತಿದ್ದಳು. ಇದನ್ನು ಸಹಪಾಠಿಗಳು ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸುವ ಬದಲು ಶಿಕ್ಷಕರು, ನಾಳೆ ಬೆಳಗ್ಗೆ ನೋಡೋಣ, ಬಾಮ್ ಹಚ್ಚಿಕೊಂಡು ಮಲಗಲು ತಿಳಿಸಿದ್ದಾರೆ.
ತೀವ್ರ ಅಸ್ವಸ್ಥಳಾಗಿದ್ದ ವಿದ್ಯಾರ್ಥಿನಿ ರಾತ್ರಿ ಬಾಮ್ ಹಚ್ಚಿಕೊಂಡು ಮಲಗಿದ್ದು ಮರುದಿನ ಬೆಳಗ್ಗೆ ಎದ್ದೇಳಲೇ ಇಲ್ಲ. ಸ್ನೇಹಿತರು ಎಬ್ಬಿಸುವ ಪ್ರಯತ್ನ ನಡೆಸಿದ್ದು ಫಲ ನೀಡಲಿಲ್ಲ. ಮೂಗು ಹಾಗೂ ಬಾಯಿಯಿಂದ ನೊರೆ ಬಂದಿದ್ದು, ತಕ್ಷಣವೇ ಶಿಕ್ಷಕರಿಗೆ ಮಾಹಿತಿ ಮುಟ್ಟಿಸಿದ್ದರು. ಬಾಲಕಿಯನ್ನು ಕಾಗಜನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ಬಾಲಕಿ ಸಾವನ್ನಪ್ಪಿದ್ದಾಳೆಂದು ದೃಢಪಡಿಸಿದ್ದಾರೆ.
ಇದನ್ನೂ ಓದಿ: 3 ಡೋಸ್ ಲಸಿಕೆ ಪಡೆದ ಬಾಲಕಿ ರೇಬಿಸ್ಗೆ ಬಲಿ.. ವ್ಯಾಕ್ಸಿನ್ ಗುಣಮಟ್ಟದ ಮೇಲೆ ಶಂಕೆ
ಕಾಗಜನಗರ ಮಂಡಲದ ಅಂಕುಸಾಪುರದ ಶಂಕರ್-ನೀಲಾಬಾಯಿ ದಂಪತಿಯ ಹಿರಿಯ ಪುತ್ರಿ ಐಶ್ವರ್ಯ 8ನೇ ತರಗತಿ ಓದುತ್ತಿದ್ದಳು. ಕಸ್ತೂರಬಾ ವಿದ್ಯಾಲಯದ ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದಳು.
ಶಿಕ್ಷಕರು, ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಆಕ್ರೋಶ: ಮಗಳು ಸಾವನ್ನಪ್ಪಲು ಹಾಸ್ಟೆಲ್ ಸಿಬ್ಬಂದಿ ಹಾಗೂ ಶಿಕ್ಷಕರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಪೋಷಕರು, ಸಂಬಂಧಿಕರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಸುಮಾರು 8 ಗಂಟೆಗಳ ಕಾಲ ವಿದ್ಯಾರ್ಥಿನಿಯ ಶವವನ್ನು ವಿದ್ಯಾಲಯದ ಆವರಣದ ಮುಂದಿಟ್ಟುಕೊಂಡು ಆಕ್ರೋಶ ಹೊರಹಾಕಿದರು. ಈ ಸಂದರ್ಭದಲ್ಲಿ ಸಿಬ್ಬಂದಿ ಹಾಗೂ ಶಿಕ್ಷಕರ ಮೇಲೆ ಹಲ್ಲೆ ಯತ್ನವೂ ಸಹ ನಡೆದಿದೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ರಾಜೇಶಂ, ಡಿಇಒ ಅಶೋಕ್ ಸೇರಿದಂತೆ ಅನೇಕರು ಭೇಟಿ ನೀಡಿದ್ದು ಸಮಗ್ರ ತನಿಖೆ ನಡೆಸಿ, ಕರ್ತವ್ಯಲೋಪ ಎಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಸಂತ್ರಸ್ತೆಯ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರದ ಚೆಕ್ ನೀಡಲಾಗಿದೆ.