ಭೋಪಾಲ್(ಮಧ್ಯಪ್ರದೇಶ): ಭಾರತದ 'ಹುಲಿಗಳ ರಾಜ್ಯ' ಎಂಬ ಹೆಗ್ಗಳಿಕೆಯ ಸ್ಥಾನಮಾನವನ್ನು ಉಳಿಸಿಕೊಳ್ಳಲು ಮಧ್ಯಪ್ರದೇಶ ಮತ್ತು ಕರ್ನಾಟಕ ಪೈಪೋಟಿ ನಡೆಸುತ್ತಿವೆ. 2022ರ ಸಮೀಕ್ಷೆಯಂತೆ ಮಧ್ಯಪ್ರದೇಶವು 34 ಹುಲಿಗಳನ್ನು ಕಳೆದುಕೊಂಡಿದ್ದು, ಕರ್ನಾಟಕದಲ್ಲಿ 15 ಹುಲಿಗಳು ಸಾವನ್ನಪ್ಪಿದೆ. ಹೀಗಾಗಿ ಕರ್ನಾಟಕ 'ಹುಲಿಗಳ ರಾಜ್ಯ' ಪಟ್ಟಕ್ಕೆ ಏರಲಿದೆಯಾ? ಎಂದು ಕಾದುನೋಡಬೇಕಿದೆ.
2018 ರ ಸಮೀಕ್ಷೆ ಪ್ರಕಾರ, ಮಧ್ಯಪ್ರದೇಶವು ಕರ್ನಾಟಕಕ್ಕಿಂತ ಹೆಚ್ಚು ಹುಲಿಗಳನ್ನು ಹೊಂದಿತ್ತು. ಆದರೆ ಈ ಬಾರಿ ದಕ್ಷಿಣ ರಾಜ್ಯಕ್ಕಿಂತ ಮಧ್ಯಪ್ರದೇಶದಲ್ಲಿ ಹುಲಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿವೆ. ಆದರೆ ಸಾವಿಗೆ ಕಾರಣವೇನು ಎಂಬುದು ನಿಗೂಢವಾಗಿದೆ ಎಂದು ಹಿರಿಯ ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತದ ಹುಲಿ ರಾಜ್ಯ ಎಂಬ ಟ್ಯಾಗ್ಗಾಗಿ 524 ಹುಲಿಗಳಿಗೆ ನೆಲೆಯಾಗಿರುವ ಕರ್ನಾಟಕವು 526 ಹುಲಿಗಳಿಗೆ ಆಶ್ರಯವಾಗಿರುವ ಮಧ್ಯಪ್ರದೇಶದೊಂದಿಗೆ ಸ್ಪರ್ಧಿಸುತ್ತಿದೆ. ರಾಷ್ಟ್ರೀಯ ಹುಲಿ ಗಣತಿಯನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಇತ್ತೀಚಿನ ಗಣತಿಯನ್ನು 2022ರಲ್ಲಿ ನಡೆಸಲಾಯಿತು ಮತ್ತು ಅದರ ವರದಿಯನ್ನು ಈ ವರ್ಷ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಹುಲಿಗಳ ಸಂಖ್ಯೆಗೆ ಸಂಬಂಧಿಸಿದಂತೆ ಯಾವ ರಾಜ್ಯವು ಮುನ್ನಡೆಯಲ್ಲಿದೆ? ಎಂಬುದನ್ನು ತಿಳಿಯಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ವೆಬ್‌ಸೈಟ್‌ನಲ್ಲಿ ಮಾಹಿತಿ ಅಪ್‌ಲೋಡ್ ಮಾಡಿದೆ. ಇದರ ಪ್ರಕಾರ, ಮಧ್ಯಪ್ರದೇಶವು 2022 ರಲ್ಲಿ 34 ಹುಲಿಗಳನ್ನು ಕಳೆದುಕೊಂಡಿದ್ದು, ಕರ್ನಾಟಕದಲ್ಲಿ 15 ಹುಲಿಗಳು ಸಾವನ್ನಪ್ಪಿದೆ. ಆದರೆ ಹುಲಿಗಳ ಸಾವಿಗೆ ಕಾರಣಗಳು ತಿಳಿದುಬಂದಿಲ್ಲ. ಎನ್‌ಟಿಸಿಎ ವೆಬ್‌ಸೈಟ್ ಪ್ರಕಾರ, ದೇಶದಲ್ಲಿ ಕಳೆದ ವರ್ಷ ಒಟ್ಟು 117 ಹುಲಿಗಳು ಸಾವನ್ನಪ್ಪಿದ್ದವು.
ಇದನ್ನೂ ಓದಿ: ರಾಜಸ್ಥಾನದ ಅರಣ್ಯಗಳಿಂದ 23ಕ್ಕೂ ಹೆಚ್ಚು ಹುಲಿಗಳು ಕಣ್ಮರೆ: ಕಾರಣವೇನು?
'ನಾವು ರಾಜ್ಯದಲ್ಲಿ ಗರಿಷ್ಟ ಸಂಖ್ಯೆಯ ಹುಲಿಗಳನ್ನು ಹೊಂದಿದ್ದೇವೆ. ರಾಜ್ಯದಲ್ಲಿ ಸಂಭವಿಸಿರುವ ಹುಲಿಗಳ ಮರಣವನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ. ಆದರೆ ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಬಹುತೇಕ ಒಂದೇ ಆಗಿರುವಾಗ ನಮ್ಮಲ್ಲಿ ಮಾತ್ರ ಹುಲಿಗಳ ಸಾವು ಯಾಕೆ ಹೆಚ್ಚಾಗಿದೆ?ಎಂಬುದು ತಿಳಿಯುತ್ತಿಲ್ಲ. ಹುಲಿಗಳ ಸರಾಸರಿ ವಯಸ್ಸು 12 ರಿಂದ 18 ವರ್ಷಗಳಷ್ಟೇ ಆಗಿವೆ. ಕೆಲವೊಮ್ಮೆ ಹುಲಿಗಳು ಕಾಡಲ್ಲಿ ಅಥವಾ ಗುಹೆಯಲ್ಲಿ ಸಾವನ್ನಪ್ಪುತ್ತವೆ' ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ.ಎಸ್.ಚೌಹಾಣ್ ತಿಳಿಸಿದ್ದಾರೆ. 'ಮಧ್ಯಪ್ರದೇಶ ಸೇರಿದಂತೆ ಇತರೆ ರಾಜ್ಯಗಳಲ್ಲಿ ಹುಲಿ ಸಾವು ಸಂಭವಿಸಿದ್ದರ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಒಂದು ವೇಳೆ ಸಾವಿನ ಬಗ್ಗೆ ತಿಳಿದ್ದಲ್ಲಿ ಪ್ರತಿ ಹುಲಿಯ ಸಾವಿನ ಬಗ್ಗೆಯೂ ಸೂಕ್ತ ತನಿಖೆ ನಡೆಸಲಾಗುವುದು ಮತ್ತು ಸಾವು ಅನುಮಾನಾಸ್ಪದವಾಗಿ ಕಂಡುಬಂದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಹಿರಿಯ ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಕಳೆದ ವರ್ಷ ಮಧ್ಯಪ್ರದೇಶದಲ್ಲಿ ದಾಖಲಾದ 34 ಹುಲಿಗಳ ಸಾವಿಗೆ ಸಂಬಂಧಿಸಿ ಬಾಂಧವ್ಗಢ ಹುಲಿ ಸಂರಕ್ಷಿತ ಪ್ರದೇಶವು ಅತಿದೊಡ್ಡ ನಷ್ಟವನ್ನು ಅನುಭವಿಸಿದೆ. 12 ತಿಂಗಳಲ್ಲಿ 9 ದೊಡ್ಡ ಹುಲಿಗಳನ್ನು ಕಳೆದುಕೊಂಡಿದೆ. ಪೆಂಚ್ನಲ್ಲಿ 5 ಮತ್ತು ಕನ್ಹಾದಲ್ಲಿ 4 ಹುಲಿಗಳು ಸಾವನ್ನಪ್ಪಿದೆ. 2010 ಮತ್ತು 2014 ರಲ್ಲಿ ಹುಲಿ ಸಮೀಕ್ಷೆಯ ಪ್ರಕಾರ, ಕರ್ನಾಟಕ ರಾಜ್ಯವು ಹುಲಿಗಳ ರಾಜ್ಯ ಎಂಬ ಟ್ಯಾಗನ್ನು ಪಡೆದುಕೊಂಡಿತ್ತು. 2006 ಮತ್ತು 2018 ಮಧ್ಯಪ್ರದೇಶ ಆ ಟ್ಯಾಗ್ನ್ನು ಕಸಿದುಕೊಂಡಿತು. ಹುಲಿಗಳ ಗಣತಿಯ ವರದಿ ಪ್ರಕಾರ ಭಾರತದಲ್ಲಿ ಹುಲಿಗಳ ಅಂದಾಜು ಸಂಖ್ಯೆ 2006 ರಲ್ಲಿ 1,411 ರಿಂದ 2018 ರಲ್ಲಿ 2,967 ಕ್ಕೆ ಏರಿದೆ.
ಇದನ್ನೂ ಓದಿ: ಹುಲಿಗಳ ಸಮೀಕ್ಷೆ.. ನಂ.1 ಪಟ್ಟ ಕಳೆದುಕೊಂಡ ರಾಜ್ಯ, ಈಗಿರುವ ಹುಲಿಗಳ ಸಂಖ್ಯೆ ಎಷ್ಟು?