ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದು ಮತದಾನ ಮುಕ್ತಾಯವಾಗಿದೆ. ಮತದಾನೋತ್ತರ ಸಮೀಕ್ಷೆಗಳು ಪ್ರಕಟಿಸುತ್ತಿದೆ. ರಿಪಬ್ಲಿಕ್ ಟಿವಿ, ಟಿವಿ9 ಭಾರತವರ್ಷ್ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ, ಮತ್ತೆ ಅತಂತ್ರ ಫಲಿತಾಂಶದ ಭವಿಷ್ಯ ನುಡಿದಿದೆ. ಸಿ ವೋಟರ್ ಕಾಂಗ್ರೆಸ್ಗೆ ಬಹುಮತದ ಅಂಚಿಗೆ ತಲುಪಲಿದೆ ಎಂದು ಭವಿಷ್ಯ ಹೇಳಿದ್ದರೆ, ನ್ಯೂಸ್ ನೇಷನ್ ಸಮೀಕ್ಷೆಯು ಬಿಜೆಪಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದೆ.
- ರಿಪಬ್ಲಿಕ್ ಟಿವಿ ಮತದಾನೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ 85ರಿಂದ 100 ಸ್ಥಾನ, ಕಾಂಗ್ರೆಸ್ಗೆ 94ರಿಂದ 108 ಸ್ಥಾನ, ಜೆಡಿಎಸ್ಗೆ 24ರಿಂದ 32 ಸ್ಥಾನ ಬಂದಿದ್ದರೆ, 2ರಿಂದ 6 ಸ್ಥಾನಗಳಲ್ಲಿ ಇತರರು ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದಿದೆ.
- ಟಿವಿ 9 ಭಾರತವರ್ಷ್ ತನ್ನ ಚುನಾಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ 88ರಿಂದ 98 ಸ್ಥಾನ, ಕಾಂಗ್ರೆಸ್ಗೆ 99ರಿಂದ 109 ಸ್ಥಾನ, ಜೆಡಿಎಸ್ಗೆ 21ರಿಂದ 26 ಸ್ಥಾನ ಹಾಗೂ 0ರಿಂದ 4 ಸ್ಥಾನಗಳಲ್ಲಿ ಇತರರು ಜಯ ದಾಖಲಿಸಿದ್ದಾರೆ ಎಂದು ಹೇಳಿದೆ.
- ಝೀನ್ಯೂಸ್ ತನ್ನ ಸಮೀಕ್ಷೆಯಲ್ಲಿ ಬಿಜೆಪಿಗೆ 79ರಿಂದ 94 ಸ್ಥಾನ, ಕಾಂಗ್ರೆಸ್ಗೆ 103ರಿಂದ 118 ಸ್ಥಾನ, ಜೆಡಿಎಸ್ಗೆ 25ರಿಂದ 33 ಸ್ಥಾನ ಮತ್ತು 2ರಿಂದ 5 ಸ್ಥಾನಗಳಲ್ಲಿ ಇತರರು ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದೆ.
- ನ್ಯೂಸ್ ನೇಷನ್ ತನ್ನ ಸಮೀಕ್ಷೆಯಲ್ಲಿ ಬಿಜೆಪಿಗೆ 114 ಸ್ಥಾನ, ಕಾಂಗ್ರೆಸ್ಗೆ 86 ಸ್ಥಾನ, ಜೆಡಿಎಸ್ಗೆ 21 ಸ್ಥಾನ ಹಾಗೂ ಇತರರೆಗೆ ಮೂರು ಸ್ಥಾನಗಳನ್ನು ನೀಡಿದೆ.
- ಸಿ ವೋಟರ್ ಮತದಾನೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ 83ರಿಂದ 95 ಸ್ಥಾನ, ಕಾಂಗ್ರೆಸ್ಗೆ 100ರಿಂದ 112 ಸ್ಥಾನ, ಜೆಡಿಎಸ್ಗೆ 21ರಿಂದ 29 ಸ್ಥಾನ ನೀಡಿದ್ದರೆ, ಇತರರು 2ರಿಂದ 8 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದೆ.
ರಾಜ್ಯದಲ್ಲಿ ಯಾವುದೇ ಪಕ್ಷ ಸರಳ ಬಹುಮತ ಪಡೆದು ಅಧಿಕಾರಕ್ಕೆ ಬರಲು ಕನಿಷ್ಠ 113 ಸ್ಥಾನಗಳ ಅಗತ್ಯ ಇದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿತ್ತು. ಬಿಜೆಪಿ 104 ಸ್ಥಾನ, ಕಾಂಗ್ರೆಸ್ 80, ಜೆಡಿಎಸ್ 37 ಹಾಗೂ ಮೂವರು ಇತರರು ಗೆಲುವು ಸಾಧಿಸಿದ್ದರು. ಆಗ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಅತಿ ಕಡಿಮೆ ಸ್ಥಾನ ಹೊಂದಿದ್ದರೂ ಜೆಡಿಎಸ್ಗೆ ಕಾಂಗ್ರೆಸ್ ಮುಖ್ಯಮಂತ್ರಿ ಪಟ್ಟ ಬಿಟ್ಟು ಕೊಟ್ಟಿತ್ತು.
ಹೆಚ್ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟವು 13 ತಿಂಗಳು ಅಧಿಕಾರ ನಡೆಸಿತ್ತು. ಆದರೆ, ನಂತರದಲ್ಲಿ ಕಾಂಗ್ರೆಸ್ನ 14 ಮತ್ತು ಜೆಡಿಎಸ್ನ ಮೂವರು ಸೇರಿ ಒಟ್ಟು 17 ಶಾಸಕರು ಬಂಡಾಯ ಎದ್ದಿದ್ದರು. ನಂತರ ಎಲ್ಲರೂ ಬಿಜೆಪಿ ಸೇರಿದ್ದರಿಂದ ಹೊಸ ಸರ್ಕಾರ ರಚನೆ ಮಾಡಲಾಗಿತ್ತು. ಇದಾದ ಬಳಿಕ ನಡೆದ ಉಪ ಚುನಾವಣೆಯಲ್ಲಿ 12 ಸ್ಥಾನಗಳಲ್ಲಿ ಗೆದ್ದ ಬಿಜೆಪಿ ತನ್ನ ಅಧಿಕಾರವನ್ನು ಭದ್ರ ಪಡಿಸಿಕೊಂಡಿತ್ತು. ಬಿಎಸ್ ಯಡಿಯೂರಪ್ಪ ಎರಡು ವರ್ಷ ಅಧಿಕಾರಾವಧಿ ಪೂರೈಸಿದ ಬಳಿಕ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಆಗಿ ಬಿಜೆಪಿ ನೇಮಿಸಿತ್ತು.
ಇದನ್ನೂ ಓದಿ: ಕರ್ನಾಟಕ ಎಲೆಕ್ಷನ್ ಹವಾ: ಮತ ಚಲಾಯಿಸಿದ ರಾಜಕೀಯ ನಾಯಕರು, ಅಭ್ಯರ್ಥಿಗಳು! ಫೋಟೋಗಳಲ್ಲಿ ನೋಡಿ!!