ದೆಹಲಿ: ಕೇರಳದ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ನಡೆದಿದ್ದ ವಿಮಾನ ದುರಂತ ಪ್ರಕರಣದ ತನಿಖಾ ವರದಿಯನ್ನು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಸಲಾಗಿದೆ.
ಕಳೆದ ವರ್ಷ ಆಗಸ್ಟ್ 7ರಂದು ಈ ಘಟನೆ ಜರುಗಿತ್ತು. ಬರೋಬ್ಬರಿ ಒಂದು ವರ್ಷದ ನಂತರ ವರದಿ ಸಲ್ಲಿಕೆಯಾಗಿದೆ. ವಿಮಾನವು ರನ್‌ವೇ ಮತ್ತು ರನ್‌ವೇನ ಸುರಕ್ಷತಾ ವಲಯ ದಾಟಿ ಹೋಗಿ ಅಪಘಾತಕ್ಕೀಡಾಗಿದೆ. ನಂತರ ಟೇಬಲ್ ಟಾಪ್ ರನ್‌ವೇನಿಂದ ಕೆಳಕ್ಕೆ ಉರುಳಿದೆ. ಹೀಗಾಗಿ ವಿಮಾನವು ಮೂರು ಭಾಗಗಳಾಗಿ ಒಡೆದಿತ್ತು ಎಂದು ಸಲ್ಲಿಕೆಯಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿಮಾನವನ್ನು ಚಲಾಯಿಸುತ್ತಿದ್ದ ಪೈಲಟ್ ಎಸ್‌ಒಪಿ ಅನುಸರಿಸದೇ ಇದ್ದದ್ದು,ಈ ದುರಂತಕ್ಕೆ ಕಾರಣ. ಹಾಗೆ ಪೈಲಟ್ ಮಾನಿಟರಿಂಗ್ನ ‘ಗೋ ಅರೌಂಡ್’ ಸೂಚನೆಯನ್ನು ಅವರು ಅನುಸರಿಸದೇ, ಟಚ್‌ಡೌನ್ ವಲಯವನ್ನು ಮೀರಿ ಲ್ಯಾಂಡ್ ಮಾಡಲೆತ್ನಿಸಿದ್ದರು. ಪೈಲಟ್ ಮಾನಿಟರಿಂಗ್ ವಿಮಾನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ B737-800 ದುಬೈನಿಂದ ಕೋಯಿಕ್ಕೋಡ್ನಲ್ಲಿ ಕಳೆದ ವರ್ಷ ಆಗಸ್ಟ್ 7 ರಂದು ಅಪಘಾತಕ್ಕೀಡಾಯಿತು. ಅಪಘಾತದಲ್ಲಿ ಪೈಲಟ್ ಸೇರಿದಂತೆ 20 ಜನರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದರು.