ಲಖನೌ: ಉತ್ತರ ಪ್ರದೇಶ ಸರ್ಕಾರದ ಮನವಿ ಮೇರೆಗೆ ಈ ವರ್ಷ ನಡೆಯಬೇಕಿದ್ದ ಪ್ರಸಿದ್ಧ ಕನ್ವರ್ ಯಾತ್ರೆಯನ್ನು ಕನ್ವರ್ ಸಂಘ (ಒಕ್ಕೂಟಗಳು) ರದ್ದುಗೊಳಿಸಿವೆ ಎಂದು ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್ ಸೆಹಗಲ್ ತಿಳಿಸಿದ್ದಾರೆ.
ಕೊರೊನಾ ವೈರಸ್ ಹಿನ್ನೆಲೆ ಕನ್ವರ್ ಯಾತ್ರೆಗೆ ಅವಕಾಶ ನೀಡುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಸುಪ್ರೀಂ ಕೋರ್ಟ್ ಸೂಚಿಸಿದ ನಂತರ ಯುಪಿ ಸರ್ಕಾರ ಜನಪ್ರಿಯ ತೀರ್ಥಯಾತ್ರೆಯನ್ನು ರದ್ದುಗೊಳಿಸುವಂತೆ ಕನ್ವರ್ ಸಂಘಗಳಿಗೆ ತಿಳಿಸಿತ್ತು. ಸರ್ಕಾರದ ಮನವಿಗೆ ಸ್ಪಂದಿಸಿದ ಒಕ್ಕೂಟಗಳು ಇದೀಗ ಯಾತ್ರೆಯನ್ನು ರದ್ದು ಮಾಡಿರುವುದಾಗಿ ತಿಳಿಸಿವೆ.
ಕನ್ವರ್ ಯಾತ್ರೆಯ ವಿಶೇಷತೆ: ಶಿವನನ್ನು ಆರಾಧಿಸುವ ಭಕ್ತರು ಪ್ರತಿ ವರ್ಷ ಕನ್ವರ್ ತೀರ್ಥಯಾತ್ರೆಯನ್ನು ಕೈಗೊಳ್ಳುತ್ತಾರೆ. ಭಕ್ತರು ಸಾಮಾನ್ಯವಾಗಿ ಗಂಗಾ ನದಿಯಿಂದ ನೀರು ಸಂಗ್ರಹಿಸಲು ನೂರಾರು ಕಿಲೋಮೀಟರ್ ನಡೆದು ಬಂದು ಗಂಗಾ ನದಿಯ ನೀರನ್ನು ಸಂಗ್ರಹಿಸಿಕೊಂಡು ತಮ್ಮ ಊರುಗಳಲ್ಲಿರುವ ಶಿವನ ದೇವಾಲಯಗಳಿಗೆ ಅರ್ಪಿಸುತ್ತಾರೆ.