ನವದೆಹಲಿ: ರಾಜ್ಯದಿಂದ ಕೇಂದ್ರ ಸಚಿವ ಸ್ಥಾನಕ್ಕೆ ಆಯ್ಕೆಯಾದ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದೆ. ಸಂಪುಟ ದರ್ಜೆಯ ಖಾತೆಗಳು ಸಿಗದೇ ನಿರಾಸೆಯಾದರೂ, ನಾಲ್ಕು ಮಂದಿ ಹೊಸ ಮುಖಗಳಿಗೆ ಮೋದಿ ಸರ್ಕಾರ ಮಣೆ ಹಾಕಿರುವುದು ಸಂತಸ ಮೂಡಿಸಿದೆ.
ರಾಜ್ಯಸಭಾ ಸದಸ್ಯರಾಗಿ, ಈಗ ಸಚಿವ ಸ್ಥಾನ ಪಡೆದಿರುವ ರಾಜೀವ್ ಚಂದ್ರಶೇಖರ್ ಅವರಿಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಖಾತೆಗಳ ರಾಜ್ಯ ಸಚಿವ ಸ್ಥಾನ ಒಲಿದು ಬಂದಿದೆ.
ಮಹಿಳಾ ಮಣಿಗಳಲ್ಲಿ ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆಯಾಗಿ ಆಯ್ಕೆಯಾಗಿದ್ದು, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವೆಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಮೊದಲ ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಎ. ನಾರಾಯಣಸ್ವಾಮಿಗೆ ಕೇಂದ್ರ ಸಚಿವರಾಗಿ ಆಯ್ಕೆಯಾಗಿ ದಾಖಲೆ ಸೃಷ್ಟಿಸಿದ್ದು, ಅವರಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ಸ್ಥಾನ ಒಲಿದುಬಂದಿದೆ.
ಇದನ್ನೂ ಓದಿ: 2 ರೂಪಾಯಿಗೆ ಔಷಧ, 8 ಲಕ್ಷ ರೋಗಿಗಳ ಸೇವೆ: ಮೋದಿ ಸಂಪುಟದಲ್ಲಿ ಸ್ಥಾನ ಪಡೆದ ಡಾ.ಮಹೇಂದ್ರಭಾಯ್
ಬೀದರ್ನ ಭಗವಂತ ಖೂಬಾ ಅವರು ಹೊಸ ಮತ್ತು ನವೀಕರಣ ಮಾಡಬಹುದಾದ ಶಕ್ತಿ ಸಂಪನ್ಮೂಲ ಖಾತೆ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವರಾಗಿ ಆಯ್ಕೆಯಾಗಿದ್ದಾರೆ.