ಖಜುರಾಹೊ(ಮಧ್ಯಪ್ರದೇಶ): ರಾಯ್‌ಪುರದ ರಾವಣಭಟ್ಟ ಮೈದಾನದಲ್ಲಿ ನಡೆದ ಎರಡು ದಿನಗಳ ಧರ್ಮ ಸಂಸದ್‌ನ ಕೊನೆಯ ದಿನದಂದು ಭಾರಿ ಗದ್ದಲ ಉಂಟಾಗಿತ್ತು. ಧರ್ಮ ಸಂಸತ್ತಿನಲ್ಲಿ ಉಪಸ್ಥಿತರಿದ್ದ ಧಾರ್ಮಿಕ ಗುರು ಕಲಿಚರಣ್ ಮಹಾರಾಜ್ ನಾಥೂರಾಂ ಗೋಡ್ಸೆಗೆ ನಮನ ಸಲ್ಲಿಸಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಿಚರಣ್ ಮಹಾರಾಜ್ ಅವರನ್ನು ರಾಯ್‌ಪುರ ಪೊಲೀಸರು ಇಂದು ಬೆಳಗ್ಗೆ 4 ಗಂಟೆಯ ಸುಮಾರಿಗೆ ಬಂಧಿಸಿದ್ದಾರೆ. ಮಧ್ಯಪ್ರದೇಶದ ಖಜುರಾಹೊದಿಂದ ಸುಮಾರು 25 ಕಿಮೀ ದೂರದಲ್ಲಿರುವ ಭಾಗೇಶ್ವರ ಧಾಮ್ ಬಳಿ ಬಾಡಿಗೆ ವಸತಿಗೃಹದಲ್ಲಿ ಸ್ವಾಮೀಜಿ ಮಹಾರಾಜ್ ತಂಗಿದ್ದರು.
ಇಂದು ಸಂಜೆ ವೇಳೆಗೆ ಪೊಲೀಸ್ ತಂಡ ಆರೋಪಿ ಜೊತೆ ರಾಯ್‌ಪುರ ತಲುಪಲಿದೆ ಎಂದು ರಾಯ್‌ಪುರ ಎಸ್ಪಿ ಪ್ರಶಾಂತ್ ಅಗರ್ವಾಲ್ ತಿಳಿಸಿದ್ದಾರೆ.
ವಿವಾದಾತ್ಮಕ ಹೇಳಿಕೆ:
1947ರಲ್ಲಿ ದೇಶ ವಿಭಜನೆಯಾಗಲು ಮಹಾತ್ಮ ಗಾಂಧಿ ಕಾರಣ. ಅವರು ದೇಶವನ್ನು ನಾಶಪಡಿಸಿದರು ಎಂದು ಹೇಳುತ್ತಾ ಗಾಂಧೀಜಿಯನ್ನು ಅವಾಚ್ಯ ಪದಗಳಿಂದ ನಿಂದಿಸಿ ಅವರನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆಯನ್ನು ಸಂತ ಕಲಿಚರಣ್ ಹೊಗಳಿದ್ದರು.
ಕಲಿಚರಣ್ ಹಿನ್ನೆಲೆ ಏನು?:
ಕಲಿಚರಣ್ ಮಹಾರಾಜ್ ಮಹಾರಾಷ್ಟ್ರದ ಅಕೋಲಾದ ಹಳೆನಗರದ ಶಿವಾಜಿ ನಗರದ ನಿವಾಸಿ. ನಿಜವಾದ ಹೆಸರು ಅಭಿಜಿತ್ ಧನಂಜಯ್ ಸರಾಗ್. ಭಾವಸಾರ್ ಸಮಾಜಕ್ಕೆ ಸೇರಿದವರು. ಇವರು ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದು, ತಂದೆ ಧನಂಜಯ್ ಸರಾಗ್ ಅಕೋಲಾದ ಜಯನ್ ಚೌಕ್‌ನಲ್ಲಿ ಮೆಡಿಕಲ್ ಶಾಪ್ ಹೊಂದಿದ್ದಾರೆ.
ಕಲಿಚರಣ್ ಮಹಾರಾಜ್‌ಗೆ ಬಾಲ್ಯದಿಂದಲೂ ಅಧ್ಯಯನದಲ್ಲಿ ಆಸಕ್ತಿ ಇರಲಿಲ್ಲ. ಈ ಕಾರಣಕ್ಕಾಗಿಯೇ ಅವರ ಪೋಷಕರು ಆತನನ್ನು ಇಂದೋರ್‌ಗೆ ಕಳುಹಿಸಿದ್ದರು. ಇಂದೋರ್‌ನಲ್ಲಿದ್ದು ಹಿಂದಿ ಮಾತನಾಡಲು ಕಲಿತರು. ಇದೇ ವೇಳೆ, ಭಯ್ಯಾಜಿ ಮಹಾರಾಜರ ಆಶ್ರಮಕ್ಕೆ ಹೋಗತೊಡಗಿದರು. ಇಲ್ಲಿಂದ ಅವರ ಆಧ್ಯಾತ್ಮಿಕ ಜೀವನ ಪ್ರಾರಂಭವಾಯಿತು ಮತ್ತು ಅವರು ಕಲಿಚರಣ್ ಎಂಬ ಹೆಸರು ಪಡೆದರು.
ಕಲಿಚರಣ್ ಅಲಿಯಾಸ್ ಅಭಿಜೀತ್ 8ನೇ ತರಗತಿ ಶಿಕ್ಷಣ ಪಡೆದಿದ್ದಾರೆ.