ನವದೆಹಲಿ: ಕಾಳಿಮಾತೆ ದೇವಿಯನ್ನು 'ಮಾಂಸ ಭಕ್ಷಿಸುವ ಮತ್ತು ಅಲ್ಕೊಹಾಲ್ ಸ್ವೀಕರಿಸುವ ದೇವತೆ' ಎಂದು ಕರೆದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಮತ್ತೆ ತಮ್ಮ ಆ ನಿಲುವನ್ನು ಸಮರ್ಥಿಸಿಕೊಂಡಿದ್ದು, ತಾನು ಹೇಳಿದ್ದು ತಪ್ಪಾಗಿದ್ದರೆ ಅದನ್ನು ಸಾಬೀತುಪಡಿಸುವಂತೆ ಬಿಜೆಪಿ ಹಾಗೂ ಅದರ ಬೆಂಬಲಿಗರಿಗೆ ಸವಾಲು ಹಾಕಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ದೇವಿಗೆ ಸಾಮಾನ್ಯವಾಗಿ ಮಾಂಸ ಮತ್ತು ಮದ್ಯವನ್ನು ನೈವೇದ್ಯ ನೀಡಿ ಪೂಜಿಸಲಾಗುವುದನ್ನು ಪ್ರಸ್ತಾಪಿಸಿದ ಮಹುವಾ, ಬಿಜೆಪಿಯು ತನ್ನ ಸೀಮಿತ ಹಿಂದುತ್ವದ ಕಲ್ಪನೆಯನ್ನು ಆಧರಿಸಿ ಪೋಸ್ಟರ್ ವಿರುದ್ಧ ಆರೋಪಗಳನ್ನು ಮಾಡುತ್ತಿದೆ ಎಂದರು.
ಬಿಜೆಪಿಯು ಏಕನಂಬಿಕೆಯ, ಉತ್ತರ ದಿಕ್ಕಿನೆಡೆ ಕೇಂದ್ರಿತವಾದ, ಬ್ರಾಹ್ಮಣ ಕೇಂದ್ರಿತ ಮತ್ತು ಪಿತೃಪ್ರಧಾನವಾದ ಹಿಂದೂ ಧರ್ಮದ ಕಲ್ಪನೆಯನ್ನು ಹೇರಲು ಪ್ರಯತ್ನಿಸುತ್ತಿದೆ ಮತ್ತು ಸಾಕ್ಷ್ಯಚಿತ್ರದಲ್ಲಿನ ಕಾಳಿ ದೇವಿಯ ಧೂಮಪಾನದ ಪೋಸ್ಟರ್‌ಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಬಿಜೆಪಿಯ ತಪ್ಪು ಕಲ್ಪನೆಯ ಒಂದು ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.
"ನಾನು ಹೇಳುತ್ತಿರುವುದು ತಪ್ಪು ಎಂದು ಬಿಜೆಪಿ ಸಾಬೀತುಪಡಿಸಲಿ. ಅವರು ನನ್ನ ವಿರುದ್ಧ ಪಶ್ಚಿಮ ಬಂಗಾಳದ ಎಲ್ಲಿ ಬೇಕಾದರೂ ಕೇಸ್ ಹಾಕಲಿ. ಆದರೆ, ಅವರು ಎಲ್ಲೇ ನನ್ನ ವಿರುದ್ಧ ದೂರು ದಾಖಲಿಸಿದರೂ ಅಲ್ಲಿಂದ 5 ಕಿಲೋಮೀಟರ್ ಒಳಗೆ ಮಾಂಸ ಮತ್ತು ಮದ್ಯದ ನೈವೇದ್ಯ ಸ್ವೀಕರಿಸುವ ಕಾಳಿಮಾತೆಯ ದೇವಸ್ಥಾನ ಇದ್ದೇ ಇರುತ್ತದೆ. ನನ್ನದೇ ರಾಜ್ಯದಲ್ಲಿ ನನ್ನ ವಿರುದ್ಧ ಅವರು ಕ್ರಮ ತೆಗೆದುಕೊಳ್ಳುವುದನ್ನು ನಾನು ನೋಡಬಯಸುತ್ತೇನೆ." ಎಂದು ಸಂದರ್ಶನವೊಂದರಲ್ಲಿ ಮಹುವಾ ಹೇಳಿದ್ದಾರೆ.
ನನ್ನ ಹೇಳಿಕೆಯನ್ನು ಸಮರ್ಥಿಸುವಂಥ ಇನ್ನೂ ಅನೇಕ ದೇವಾಲಯಗಳು ಭಾರತದಲ್ಲಿವೆ. ಮಧ್ಯಪ್ರದೇಶ ಉಜ್ಜಯಿನಿಯ ಕಾಲಭೈರವ ದೇವಸ್ಥಾನ ಮತ್ತು ಕಾಮಾಖ್ಯ ದೇವಸ್ಥಾನಗಳು ನನ್ನ ಹೇಳಿಕೆಗೆ ಬಲವಾದ ಸಾಕ್ಷಿಗಳಾಗಿವೆ. ನಾನು ತಪ್ಪು ತಿಳಿದಿಲ್ಲ ಎಂಬ ಸತ್ಯ ನನಗೆ ಗೊತ್ತಿದೆ ಮತ್ತು ನಾನು ತಪ್ಪು ಮಾಡಿದ್ದರೆ ಹಾಗಂತ ಪ್ರೂವ್ ಮಾಡಲಿ ಎಂದು ಸಂಸದೆ ಮೊಯಿತ್ರಾ ಸವಾಲು ಹಾಕಿದ್ದಾರೆ.
"ಬಿಜೆಪಿಯವರೇ ಧೈರ್ಯವಿದ್ದರೆ ಬನ್ನಿ! ನಾನೊಬ್ಬ ಕಾಳಿಮಾತೆಯ ಭಕ್ತೆ. ಯಾವುದಕ್ಕೂ ಹೆದರಲ್ಲ. ನಿಮ್ಮ ಅಜ್ಞಾನಕ್ಕೆ ಹೆದರಲ್ಲ. ನಿಮ್ಮ ಗೂಂಡಾಗಳಿಗೆ ಹೆದರಲ್ಲ. ನಿಮ್ಮ ಪೊಲೀಸರಿಗೆ ಹೆದರಲ್ಲ. ನಿಮ್ಮ ಟ್ರೋಲ್ಗಳಿಗಂತೂ ಒಂಚೂರೂ ಹೆದರಲ್ಲ. ಸತ್ಯಕ್ಕೆ ಯಾರ ಆಸರೆಯೂ ಬೇಕಿಲ್ಲ." ಎಂದು ಅವರು ಟ್ವೀಟ್ ಒಂದರಲ್ಲಿ ಬರೆದಿದ್ದಾರೆ.