ನವದೆಹಲಿ: ಪತ್ರಕರ್ತ ಮೊಹಮ್ಮದ್ ಜುಬೇರ್ ಅವರನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಒಂದು ದಿನದ ಪೊಲೀಸ್ ಕಸ್ಟಡಿಗೆ ನೀಡಿದ್ದು, ಇಂದು ಮತ್ತೆ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಮೊಹಮ್ಮದ್ ಜುಬೇರ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.
ಜೂನ್ 27 ರಂದು ಜುಬೈರ್ ಅವರನ್ನು ವಿಚಾರಣೆಗೆ ಕರೆ ತರಲಾಗಿತ್ತು. ವಿಚಾರಣೆ ಬಳಿಕ ದೆಹಲಿ ಪೊಲೀಸರು ಅವರನ್ನು ಬಂಧಿಸಿ ಡ್ಯೂಟಿ ಮ್ಯಾಜಿಸ್ಟ್ರೇಟ್ ಎದುರು ಹಾಜರು ಪಡಿಸಿದ್ದರು. ವಿಚಾರಣೆ ಬಳಿಕ ಜುಬೇರನನ್ನು ಒಂದು ದಿನದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಇಂದು ಕಸ್ಟಡಿ ಅವಧಿ ಮುಗಿಯಲಿರುವುದರಿಂದ ಇಂದು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ.
ನ್ಯಾಯಾಲಯಕ್ಕೆ ಜುಬೇರ್ ಅವರನ್ನು ಹಾಜರು ಪಡಿಸಿದ ವೇಳೆ, ವಕೀಲರಾದ ಸೌತಿಕ್ ಬ್ಯಾನರ್ಜಿ ಮತ್ತು ಕನ್ವಲ್ಪ್ರೀತ್ ಕೌರ್ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದೇ ವೇಳೆ ಜುಬೈರ್ ಅವರಿಗೆ ಅರ್ಧ ಗಂಟೆ ಕಾಲ ವಕೀಲರೊಂದಿಗೆ ಮಾತನಾಡಲು ನ್ಯಾಯಾಲಯ ಅನುಮತಿ ಕೂಡಾ ನೀಡಿತ್ತು. ಪತ್ರಕರ್ತ ಮೊಹಮ್ಮದ್ ಜುಬೇರ್ ಅವರನ್ನು ಜೂನ್ 28 ರಂದು ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವಂತೆ ಡ್ಯೂಟಿ ಮ್ಯಾಜಿಸ್ಟ್ರೇಟ್ ದೆಹಲಿ ಪೊಲೀಸರಿಗೆ ಸೂಚಿಸಿದ್ದರು.
ಇದನ್ನೂ ಓದಿ : ಗಲಭೆಗೆ ಪ್ರಚೋದನೆ: ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಬಂಧನ