ಜೋಧಪುರ(ರಾಜಸ್ಥಾನ): ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹಾವಳಿ ಸಂಪೂರ್ಣವಾಗಿ ಕಡಿಮೆಯಾಗಿದ್ದು, ಇದರ ಬೆನ್ನಲ್ಲೇ ಮದುವೆ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲು ಶುರುವಾಗಿವೆ.
ಪ್ರಮುಖವಾಗಿ, ರಾಜಸ್ಥಾನದ ಜೋಧಪುರದ ಆಭರಣ ಮಾರುಕಟ್ಟೆ ವ್ಯಾಪಾರಿಗಳಿಂದ ಗಿಜಿಗಿಡುತ್ತಿದ್ದು, ಮದುವೆ ಸೀಸನ್ ಆಗಿರುವ ಕಾರಣ ಪ್ರತಿದಿನ ಲಕ್ಷಾಂತರ ಜನರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ ಜೋಧಪುರದ ಆಭರಣ ಮಾರಾಟಗಾರೊಬ್ಬರು ವಧು-ವರರಿಗೆ ಆಕರ್ಷಕವಾದ ಬೆಳ್ಳಿಯ ಬೂಟು, ಪರ್ಸ್ ಸಿದ್ಧಪಡಿಸಿದ್ದಾರೆ.
ರಾಜಸ್ಥಾನ ರಾಜಮನೆತನದ ಮದುವೆಗೆ ಪ್ರಸಿದ್ಧ ತಾಣ. ಈಗಾಗಲೇ ಬಾಲಿವುಡ್ ನಟ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಗೆ ಸಿದ್ಧತೆಗಳು ಅದ್ಧೂರಿಯಾಗಿ ಆರಂಭಗೊಂಡಿವೆ. ಜೈಪುರ, ಜೋಧಪುರ, ಉದಯಪುರ ಸೇರಿದಂತೆ ಅನೇಕ ನಗರಗಳಲ್ಲಿ ಅದ್ಧೂರಿ ವಿವಾಹ ಮಾಡಿಕೊಳ್ಳಲು ಸೆಲೆಬ್ರಿಟಿಗಳು ಇಲ್ಲಿಗೆ ಬರುತ್ತಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಆಭರಣ ವ್ಯಾಪಾರಿ ವಧು-ವರರಿಗೆ ವಿವಿಧ ಬಗೆಯ ಬೆಳ್ಳಿಯ ವಸ್ತುಗಳನ್ನು ರೆಡಿ ಮಾಡುತ್ತಿದ್ದಾರೆ.
ಬೆಳ್ಳಿಯ ಶೂ, ಪರ್ಸ್ ಮತ್ತು ಬೆಲ್ಟ್
ಆಭರಣ ವ್ಯಾಪಾರಿ ವಧು-ವರರಿಗೆ ತಯಾರಿಸಿದ ಬೆಳ್ಳಿ ಪಾದರಕ್ಷೆಗಳು, ಬೇರೆ ಬೇರೆ ವಿನ್ಯಾಸ ಹೊಂದಿವೆ. ಜೋಧಪುರ ಮೂಲದ ಆಭರಣ ವ್ಯಾಪಾರಿ ನವೀನ್ ಸೋನಿ ಇವುಗಳನ್ನು ಸಿದ್ಧಪಡಿಸಿದ್ದಾರೆ. ಇದರ ಜೊತೆಗೆ ವಧುವಿಗೋಸ್ಕರ ವಿಶೇಷ ಪರ್ಸ್ ವಿನ್ಯಾಸ ಮಾಡಲಾಗಿದ್ದು, ಅದರಲ್ಲಿ ಮೊಬೈಲ್ ಇಟ್ಟುಕೊಳ್ಳಬಹುದು. ಪುರುಷರಿಗಾಗಿ ಬೆಳ್ಳಿ ಕ್ಲಿಪ್ ಇರುವ ಬೆಲ್ಟ್ ಇದೆ.
ಹೊಸದಾಗಿ ನಿರ್ಮಾಣಗೊಂಡಿರುವ ಈ ಬೆಳ್ಳಿ ಶೂ, ಪರ್ಸ್ ಗ್ರಾಹಕರಿಗೆ ತುಂಬಾ ಇಷ್ಟವಾಗಿದ್ದು, ಖರೀದಿ ಮಾಡಲು ಹೆಚ್ಚಿನ ಜನ ಇಷ್ಟಪಡುತ್ತಿದ್ದಾರೆಂದು ವ್ಯಾಪಾರಿ ನವೀನ್ ಸೋನಿ ತಿಳಿಸಿದ್ದಾರೆ.
ಇದನ್ನೂ ಓದಿ: ಎದೆ ನೋವು: ಆಸ್ಪತ್ರೆಗೆ ದಾಖಲಾದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ
ಶೂಗಳಲ್ಲಿ 200 ಗ್ರಾಂ ಬೆಳ್ಳಿ, ಪರ್ಸ್ಗಳಲ್ಲಿ 500 ಗ್ರಾಂ ಬೆಳ್ಳಿ
ವರನ ಶೂ ತಯಾರು ಮಾಡಲು 200ರಿಂದ 300 ಗ್ರಾಂ ಬೆಳ್ಳಿ ಬಳಕೆ ಮಾಡಲಾಗಿದ್ದು, ಪರ್ಸ್ಗಾಗಿ 300ರಿಂದ 500 ಗ್ರಾಂ ಬೆಳ್ಳಿ ಬಳಕೆಯಾಗಿದೆ. ಶೂಗಳ ಬೆಲೆ 16ರಿಂದ 17 ಸಾವಿರದವರೆಗೆ ಇದ್ದು, ಪರ್ಸ್ ಬೆಲೆ 30 ಸಾವಿರ ಇದೆ.